×
Ad

ಕರಣ್ ಜೋಹರ್‌ಗೆ ಹೊಡೆಯಿರಿ: ಸಚಿವ ವಿ.ಕೆ.ಸಿಂಗ್

Update: 2016-01-23 08:56 IST

ಜೈಪುರ: "ಚಿತ್ರ ನಿರ್ಮಾಪಕ ಕರಣ್ ಜೋಹರ್‌ಗೆ ಹೋಗಿ ಹೊಡೆಯಿರಿ" ಎಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ವಿ.ಕೆ.ಸಿಂಗ್ ಮತ್ತೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ನೀಡಿದ ಹೇಳಿಕೆ ಬಗ್ಗೆ ಪತ್ರಕರ್ತರು ಸಚಿವರ ಪ್ರತಿಕ್ರಿಯೆ ಕೇಳಿದಾಗ ಸಿಂಗ್ ಮೇಲಿನಂತೆ ಉತ್ತರಿಸಿದರು. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ದೊಡ್ಡ ಪ್ರಹಸನ ಎಂದು ಜೋಹರ್ ಗುರುವಾರ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆಗೆ ಸಚಿವರ ಗಮನ ಸೆಳೆದಾಗ, "ಜಾ ಕೇ ಉಸ್ಕಿ ಪಿತಾಯಿ ಕರ್ ಲೋ ಯಾರ್, ತುಮ್ ಮೇಲೆ ಪೀಚೆ ಕ್ಯೂನ್ ಪಡಾ ದಹೆ ಹೋ" (ಹೋಗಿ ಅವರಿಗೆ ಹೊಡೆಯಿತು. ನನ್ನ ಬೆನ್ನಹಿಂದೆ ಯಾಕೆ ಬಿದ್ದಿದ್ದೀರಿ) ಎಂದು ಮರುಪ್ರಶ್ನೆ ಹಾಕಿದರು.

"ಕರಣ್ ಜೋಹರ್ ಬಗ್ಗೆ ಯಾಕೆ ನಾವು ಚರ್ಚಿಸಬೇಕು. ಅವರಲ್ಲೇ ಹೋಗಿ ಮಾತನಾಡಿ. ನನ್ನಲ್ಲಿ ಪ್ರಮುಖವಾದುದು ಇದ್ದರೆ ಕೇಳಿ. ನಾನು ಇಲ್ಲಿಗೆ ಬಂದಿರುವುದು ಪಕ್ಷದ ಕಾರ್ಯಕರ್ತರ ಭೇಟಿಗೆ ಹಾಗೂ ಅವರಿಗೆ ಪ್ರೋತ್ಸಾಹಿಸಲು" ಎಂದು ಪ್ರತಿಕ್ರಿಯಿಸಿದರು.
ಸಾಹಿತ್ಯ ಹಬ್ಬದ ಮೊದಲ ದಿನ ಜೋಹರ್, "ನಾವು ಹೇಗೆ ಪ್ರಜಾಪ್ರಭುತ್ವದಲ್ಲಿದ್ದೇವೆ? ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ" ಎಂದು ಪ್ರಶ್ನಿಸಿದ್ದರು. ಆನ್ ಅನ್‌ಸುಟೆಬಲ್ ಬಾಯ್ ಎಂಬ ವಿಷಯದ ಬಗ್ಗೆ ಲೇಖಕಿ ಶೋಭಾ ಡೇ ಹಾಗೂ ಪತ್ರಕರ್ತೆ ಪೂನಂ ಸಕ್ಸೇನಾ ಜತೆ ಚರ್ಚೆಯಲ್ಲಿ ಪಾಲ್ಗೊಂಡ ವೇಳೆ ಈ ಹೇಳಿಕೆಯನ್ನು ಕರಣ್ ನೀಡಿದ್ದರು.


"ನನಗೆ ಎಲ್ಲಿ ಹೋದರೂ ಭಯವಾಗುತ್ತದೆ. ಜೈಪುರದಲ್ಲಿ ಏನನ್ನೂ ಹೇಳಲೂ ನನಗೆ ಭಯ. ನಾನು ಮನೆ ತಲುಪುವ ಮುನ್ನ ಯಾರು ಎಫ್‌ಐಆರ್ ದಾಖಲಿಸುತ್ತಾರೋ ದೇವರಿಗೇ ಗೊತ್ತು. ನಾನೀಗ ಎಫ್‌ಐಆರ್ ಕಿಂಗ್ ಆಗಿದ್ದೇನೆ" ಎಂದು ಜೋಹರ್ ಹೇಳಿದ್ದರು.

ಸಲಿಂಗಕಾಮವನ್ನು ಅಪರಾಧವಾಗಿ ಪರಿಗಣಿಸುವ ದೇಶದ ಕಾನೂನುಗಳ ಬಗ್ಗೆಯೂ ಅವರು ಟೀಕಿಸಿದರು.
ಹರ್ಯಾಣಾದ ಫರೀದಾಬಾದ್‌ನಲ್ಲಿ ಇಬ್ಬರು ದಲಿತ ಮಕ್ಕಳನ್ನು ದಹಿಸಿದ ಘಟನೆಗೆ ಸಂಬಂಧಿಸಿದಂತೆ ಸಚಿವ ವಿ.ಕೆ.ಸಿಂಗ್ ನಿಡಿದ ಪ್ರತಿಕ್ರಿಯೆ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ಫೆಬ್ರವರಿ 17ರಂದು ನಡೆಯಲಿದೆ. ಸಿಂಗ್ ಅವರು ಈ ಘಟನೆ ಬಗ್ಗೆ ತೀರಾ ಲಘುವಾಗಿ ಪ್ರತಿಕ್ರಿಯೆ ನೀಡಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್ ಸಂಸತ್ ಭವನದ ಮುಂದೆ ಪ್ರತಿಭಟನೆಯನ್ನೂ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News