×
Ad

ತಪಾಸಣೆಯ ವೇಳೆ ಅಮೆರಿಕದ ಪರಮಾಣು ಕ್ಷಿಪಣಿಗೆ ಹಾನಿ

Update: 2016-01-23 23:35 IST

ವಾಶಿಂಗ್ಟನ್, ಜ. 23: 2014ರಲ್ಲಿ ಪರಮಾಣು ಬಾಂಬ್‌ವಾಹಕ ಕ್ಷಿಪಣಿಯೊಂದರ ತಪಾಸಣೆ ನಡೆಸುತ್ತಿದ್ದ ಮೂವರು ವಾಯು ಪಡೆ ಯೋಧರು ಮಾಡಿದ ತಪ್ಪಿನಿಂದಾಗಿ ‘ಅಪಘಾತ’ವೊಂದು ಸಂಭವಿಸಿದ್ದು, ಕ್ಷಿಪಣಿಗೆ ಹಾನಿಯಾಗಿತ್ತು ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ, ಈ ಮೂವರು ವಾಯುಪಡೆ ಯೋಧರ ‘ಪರಮಾಣು ಪ್ರಮಾಣಪತ್ರ’ವನ್ನು ಹಿಂದಕ್ಕೆ ಪಡೆಯಲಾಯಿತು ಹಾಗೂ ಸದ್ದಿಲ್ಲದೆ ಅಪಘಾತ ತನಿಖೆಯೊಂದಕ್ಕೆ ಚಾಲನೆ ನೀಡಲಾಯಿತು.
ಆದಾಗ್ಯೂ, ಅಸೋಸಿಯೇಟಡ್ ಪ್ರೆಸ್‌ಗೆ ನೀಡಿದ ಹೇಳಿಕೆಯೊಂದರಲ್ಲಿ, ಹೆಚ್ಚಿನ ವಿವರಗಳನ್ನು ನೀಡಲು ಹಾಗೂ ಕಳೆದ ವರ್ಷದ ನವೆಂಬರ್‌ನಲ್ಲಿ ಅಪಘಾತ ತನಿಖಾ ಸಮಿತಿಯು ಸಲ್ಲಿಸಿದ ವರದಿಯ ಪ್ರತಿಯನ್ನು ನೀಡಲು ವಾಯು ಪಡೆ ನಿರಾಕರಿಸಿದೆ. ಈ ಮಾಹಿತಿಯು ರಹಸ್ಯವಾಗಿದ್ದು, ಸಾರ್ವಜನಿಕವಾಗಿ ನೀಡಲಾಗದಷ್ಟು ಸೂಕ್ಷ್ಮವಾಗಿದೆ ಎಂಬ ವಿವರಣೆಯನ್ನು ನೀಡಿದೆ.
ಅಪಘಾತದಿಂದ ಯಾರಿಗೂ ಗಾಯವಾಗಿಲ್ಲ ಹಾಗೂ ಸಾರ್ವಜನಿಕ ಸುರಕ್ಷತೆಗೆ ಬೆದರಿಕೆಯೊಡ್ಡಿಲ್ಲ ಎಂದು ವಾಯು ಪಡೆ ಹೇಳಿದೆ. ತನಿಖೆಯ ಮಾಹಿತಿಯನ್ನು ಡಿಸೆಂಬರ್‌ನಲ್ಲಿ ಪೆಂಟಗನ್‌ನ ಉನ್ನತ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಅದು ತಿಳಿಸಿದೆ.
ಅಪಘಾತದ ಬಳಿಕ ಹಾನಿಗೀಡಾದ ಕ್ಷಿಪಣಿಯನ್ನು ಅದರ ಭೂಗತ ರಕ್ಷಣಾ ಹೊದಿಕೆಯಿಂದ ಹೊರತೆಗೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News