ಅನ್ಯಗ್ರಹ ಜೀವಿಗಳ ಕಾಲ ಮುಗಿಯಿತೇ?
ಈಗಾಗಲೇ ಸತ್ತು ಹೋಗಿರಬಹುದು: ಸಂಶೋಧನೆ
ವಾಶಿಂಗ್ಟನ್, ಜ. 23: ಭೂಮಿಯಾಚೆಗಿನ ಜೀವಿಗಳು ಹಿಂದಿನಿಂದಲೂ ಮನುಕುಲದ ಅತ್ಯಂತ ಆಸಕ್ತಿಯ ವಿಷಯವಾಗಿದೆ. ಈಗಂತೂ ನಾವೊಂದು ನಿರ್ಣಾಯಕ ಹಂತಕ್ಕೆ ಬಂದು ಬಿಟ್ಟಿದ್ದೇವೆ. ನಮ್ಮ ಸೌರ ಮಂಡಲದಿಂದ ಹೊರಗೆ ಹೆಚ್ಚು ಹೆಚ್ಚು ಗ್ರಹಗಳನ್ನು ನಾವು ಪತ್ತೆಹಚ್ಚುತ್ತಿದ್ದೇವೆ. ಇನ್ನು ಶೀಘ್ರದಲ್ಲೇ ಜೇಮ್ಸ್ ವೆಬ್ ಟೆಲಿಸ್ಕೋಪ್ ಮೂಲಕ ನಾವು ಈ ಅಗಾಧ ದೂರದ ಜಗತ್ತುಗಳ ಹಿಂದೆಂದೂ ನೋಡಿರದ ದೃಶ್ಯಗಳನ್ನು ನೋಡಲಿದ್ದೇವೆ.
ಮಂಗಳ ಗ್ರಹದಲ್ಲಿ ಪ್ರಾಚೀನ ಕಾಲದಲ್ಲಿ ಜೀವಿಗಳು ವಾಸಿಸುತ್ತಿದ್ದ ಕುರುಹುಗಳಿವೆಯೇ ಎಂಬುದನ್ನು ತಿಳಿದುಕೊಳ್ಳಲು ಸಾಲು ಸಾಲು ರೋಬಟ್‌ಗಳನ್ನು ನಾವು ಈ ಕೆಂಪು ಗ್ರಹಕ್ಕೆ ಕಳುಹಿಸಿದ್ದೇವೆ. ಜೀವ ಪೋಷಕ ಖನಿಜಗಳನ್ನು ಅರಸುತ್ತಾ ವ್ಯೋಮನೌಕೆಗಳು ಸಾಗರ ಆಚ್ಛಾದಿತ ಉಪಗ್ರಹಗಳ ಶೀತಲ ಕುಲುಮೆಗಳಿಗೆ ಜಿಗಿದಿವೆ. ಯಾವುದಾದರೂ ನಿಗೂಢ ಲೋಕದ ಸಂಭಾವ್ಯ ನಾಗರಿಕತೆಗಳ ಸದ್ದು-ಗದ್ದಲ ಕೇಳಬಹುದೇ ಎಂಬ ನಿರೀಕ್ಷೆಯಲ್ಲಿ ನಮ್ಮ ರೇಡಿಯೊ ಟೆಲಿಸ್ಕೋಪ್‌ಗಳನ್ನು ನಿಗೂಢ ನಕ್ಷತ್ರಗಳತ್ತ ಗುರಿಮಾಡಿದ್ದೇವೆ.
ಇವುಗಳೆಲ್ಲದರ ಹೊರತಾಗಿಯೂ, ನಮಗೆ ಈವರೆಗೆ ಬಾಹ್ಯ ಜಗತ್ತಿನ ಒಂದೇ ಒಂದು ಸೂಕ್ಷ್ಮಾಣು ಜೀವಿಯೂ ಗೋಚರಿಸಿಲ್ಲ. ಹಾಗಾದರೆ, ಆ ಜೀವಿಗಳೆಲ್ಲ ಎಲ್ಲಿ?
ಬುದ್ಧಿವಂತ ಕೋಶಗಳಾಗಿ ಬೆಳೆಯಲಿಲ್ಲವೇ?
ಹೊಸ ಅಧ್ಯಯನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಜೀವ ರೂಪುಗೊಂಡರೂ, ಹೆಚ್ಚಿನ ಸಂದರ್ಭಗಳಲ್ಲಿ ತನ್ನ ಶೈಶವಾವಸ್ಥೆಯಿಂದ ಮುಂದಕ್ಕೆ ಬದುಕುಳಿಯದಷ್ಟು ದುರ್ಬಲವಾಗಿರುತ್ತದೆ ಎಂದು ಈ ಅಧ್ಯಯನ ಹೇಳುತ್ತದೆ.
ಇದನ್ನೇ ಬೇರೆ ಮಾತಿನಲ್ಲಿ ಹೇಳುವುದಾರೆ, ನಮ್ಮದೇ ಸೌರವ್ಯೆಹದಲ್ಲಿರುವ ಇತರ ಗ್ರಹಗಳಲ್ಲಿ ಒಂದು ಕಾಲ ಘಟ್ಟದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದಿರಬಹುದು ಹಾಗೂ ಅವುಗಳಿಗೆ ಮುಂದಕ್ಕೆ ಬುದ್ಧಿವಂತ ಜೀವಿಗಳಾಗಿ ವಿಕಸನ ಹೊಂದುವ ಅವಕಾಶ ಲಭಿಸದಿರಬಹುದು.
ಈ ನಿಟ್ಟಿನಲ್ಲಿ ಪ್ರಮುಖವಾಗಿ ಗೋಚರಿಸುವುದು ಹವಾಮಾನ ಬದಲಾವಣೆ. ತಮ್ಮ ಗ್ರಹಗಳ ಹವಾಮಾನವನ್ನು ಸ್ಥಿರವಾಗಿರಿಸಲು ಅನ್ಯಗ್ರಹಗಳ ಸೂಕ್ಷ್ಮಾಣು ಜೀವಿಗಳು ವಿಫಲವಾಗಿರಬಹುದು ಎಂಬ ವಾದವನ್ನು ಸಂಶೋಧಕರು ಮಂಡಿಸುತ್ತಾರೆ.
ಆದಿ ಕಾಲದ ಭೂಮಿಯಲ್ಲಿದ್ದ ಸೂಕ್ಷ್ಮಾಣು ಜೀವಿಗಳು ತಮ್ಮ ಗ್ರಹದ ವಾತಾವರಣವನ್ನು ಸ್ಥಿರವಾಗಿರಿಸಲು ಸಹಾಯ ಮಾಡಿದವು. ಆದರೆ, ಭೂಮಿಯನ್ನು ಹೋಲುವ ಬಂಡೆಗಳನ್ನು ಒಳಗೊಂಡ ಮಂಗಳ ಮತ್ತು ಶುಕ್ರ ಮುಂತಾದ ಗ್ರಹಗಳ ಜೀವಿಗಳು ಹೀಗೆ ಮಾಡುವಲ್ಲಿ ವಿಫಲವಾಗಿರಬೇಕು ಎಂಬ ನಿರ್ಧಾರಕ್ಕೆ ಸಂಶೋಧನೆ ಬಂದಿದೆ.