×
Ad

ಮೋದಿಗೆ ಬಾಲ ಉಗ್ರರ ಭೀತಿ: ಗುಪ್ತಚರ ವರದಿ

Update: 2016-01-24 09:05 IST

ನವದೆಹಲಿ: ಕಳೆದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನರೇಂದ್ರ ಮೋದಿ ತಮ್ಮ ಭದ್ರತಾ ವ್ಯವಸ್ಥೆಯನ್ನು ಭೇದಿಸಿ, ರೆಡ್‌ಫೋರ್ಟ್‌ಗೆ ಹೋಗುವ ಮಾರ್ಗಮಧ್ಯದಲ್ಲಿ ಮಕ್ಕಳನ್ನು ಮುಕ್ತವಾಗಿ ಭೇಟಿ ಮಾಡಿದ್ದನ್ನು ಇಸ್ಲಾಮಿಕ್ ಉಗ್ರರು ಗಮನಿಸಿದ್ದು, ಮೋದಿ ವಿರುದ್ಧದ ದಾಳಿಗೆ 12-15 ವರ್ಷದ ಆತ್ಮಹತ್ಯಾ ಬಾಂಬರ್‌ಗಳನ್ನು ತರಬೇತಿಗೊಳಿಸುತ್ತಿದೆ ಎಂದು ಗುಪ್ತಚರ ವಿಭಾಗದ ಉನ್ನತ ಮೂಲಗಳು ತಿಳಿಸಿವೆ.


ಪ್ರಧಾನಿಗೆ ಸುರಕ್ಷೆ ನೀಡುವ ವಿಶೇಷ ರಕ್ಷಣಾ ಪಡೆ ಪ್ರತಿಯೊಂದು ಸಣ್ಣ ಚಲನವಲನಗಳನ್ನೂ ಸೂಕ್ಷ್ಮವಾಗಿ ಗಮಿಸುತ್ತಿದೆ. ಆತ್ಮಹತ್ಯೆ ಬಾಂಬ್ ದಾಳಿಗೆ ಸನ್ನದ್ದವಾಗಿರುವ 12-15 ವರ್ಷ ವಯಸ್ಸಿನ ಬಾಲ ಉಗ್ರರನ್ನು ದೇಶಕ್ಕೆ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ತಿಳಿಸಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ಈ ಎಚ್ಚರಿಕೆ ಸಂದೇಶವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದ್ದು, ಎಸ್‌ಪಿಜಿ, ಪೊಲೀಸ್ ಹಾಗೂ ಎನ್‌ಸಿಆರ್ ಘಟಕಗಳಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇಂಥ ಬಾಲ ಉಗ್ರರು ಪ್ರಜಾಪ್ರಭುತ್ವ ದಿನವನ್ನು ತಮ್ಮ ಸಂಚಿಗೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ವರದಿಯ ಹಿನ್ನೆಲೆಯಲ್ಲಿ ಎಸ್‌ಪಿಜಿ ಹಾಗೂ ಹಿರಿಯ ಭದ್ರತಾ ಸಲಹೆಗಾರರು ಈಗಾಗಲೇ ಮೋದಿಗೆ ವಿವರ ನೀಡಿದ್ದು, ಯಾವುದೇ ಭದ್ರತಾ ರಕ್ಷೆಯನ್ನು ಉಲ್ಲಂಘಿಸದಂತೆ ಕಟ್ಟೆಚ್ಚರ ನೀಡಲಾಗಿದೆ ಎಂದು ಹೇಳಲಾಗಿದೆ.

ಶಂಕಿತರ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೂ ಸೂಚಿಸಲಾಗಿದೆ. ಈ ಬಗ್ಗೆ ಎಚ್ಚರ ವಹಿಸಲು ವಿಶೇಷ ಘಟಕವನ್ನು ನಿಯೋಜಿಸಲಾಗಿದ್ದು, ಈ ಘಟಕಕ್ಕೆ ದಾಳಿ ಬಗ್ಗೆ ಅನಾಮಧೇಯ ಕರೆಯೊಂದು ಬಂದಿದೆ ಎಂದು ಮೂಲಗಳು ಹೇಳಿವೆ.
ಮಕ್ಕಳು ಮೆಷಿನ್ ಗನ್ ಹಾಗೂ ರಾಕೆಟ್ ಬಳಸುವ ತರಬೇತಿ ಪಡೆಯುತ್ತಿರುವ ಬಗ್ಗೆ ವಿಡಿಯೊ ತುಣುಕನ್ನು ಐಎಸ್ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News