ಚಳಿಗೆ ನಡುಗುತ್ತಿರುವ ಅಮೆರಿಕ; ಹಿಮಪಾತಕ್ಕೆ 18 ಬಲಿ
ವಾಶಿಂಗ್ಟನ್: ಅಮೆರಿಕದ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಶನಿವಾರ ತೀವ್ರ ಹಿಮಪಾತ ಸಂಭವಿಸಿದ್ದು, ರವಿವಾರವೂ ತನ್ನ ರೌದ್ರಾವತಾರವನ್ನು ಮುಂದುವರಿಸಿದೆ.
ವಾಶಿಂಗ್ಟನ್, ನ್ಯೂಯಾರ್ಕ್ ನಗರಗಳು ಸೇರಿದಂತೆ ಹಲವು ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳು ಹಿಮಪಾತದಿಂದಾಗಿ ನಿಶ್ಚಲವಾಗಿವೆ.
ತೀವ್ರ ಮಂಜು ಸುರಿಯುವ ಹಿನ್ನೆಲೆಯಲ್ಲಿ ನ್ಯೂಜರ್ಸಿ ಹಾಗೂ ಫಿಲಡೆಲ್ಫಿಯಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಿಂದಾಗಿ 13 ಮಂದಿ ಹಾಗೂ ತೀವ್ರ ಹಿಮಕ್ಕೆ 5 ಮಂದಿ ಬಲಿಯಾಗಿದ್ದಾರೆ. ನ್ಯೂಯಾರ್ಕ್ ಸೇರಿದಂತೆ ವಿವಿಧ ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳನ್ನು ಹೊರತುಪಡಿಸಿ ಮಿಕ್ಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಜನರು ಮನೆಯೊಳಗಡೆಯೇ ಇರುವಂತೆ ಹಾಗೂ ಹಿಮಪಾತ ಕಡಿಮೆಯಾಗುವವರೆಗೆ ಮನೆಯಿಂದ ಹೊರಬರದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಮೆಟ್ರೊ ಹಾಗೂ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಹೆಚ್ಚಿನ ಕಡೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿವೆ. ಹಿಮಪಾತ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.