ಭಾರತೀಯ ಕಂಪೆನಿಗಳಿಗೆ ಸಹಾಯ ಮಾಡಲು ರಫ್ತು ನಿಯಂತ್ರಣ
ವಾಶಿಂಗ್ಟನ್, ಜ. 24: ‘‘ಆಪ್ತ ಮಿತ್ರದೇಶಗಳಂತೆ’’ ಭಾರತೀಯ ಕಂಪೆನಿಗಳಿಗೂ ಅಮೆರಿಕದ ತಂತ್ರಜ್ಞಾನಗಳಿಗೆ ಸಮಾನ ಪ್ರವೇಶ ಲಭಿಸುವಂತೆ ಮಾಡಲು ರಫ್ತು ನಿಯಂತ್ರಣಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಗಮನ ಹರಿಸುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಇಂದು ಭರವಸೆ ನೀಡಿದ್ದಾರೆ. ಅದೇ ವೇಳೆ, ಭಾರತದಲ್ಲಿ ಹೊಸ ರಿಯಾಕ್ಟರ್‌ಗಳನ್ನು ನಿರ್ಮಿಸಲು ಅಮೆರಿಕದ ಕಂಪೆನಿಗಳಿಗೆ ಅವಕಾಶ ಲಭಿಸುವ ಒಪ್ಪಂದಗಳು ಹೊಸ ವರ್ಷದಲ್ಲಿ ಏರ್ಪಡುವುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಕೆಂಪು ಪಟ್ಟಿಯನ್ನು ಕಡಿತಗೊಳಿಸಿ ಭಾರತದಲ್ಲಿ ವ್ಯಾಪಾರ ಮಾಡುವುದನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಉಭಯ ದೇಶಗಳ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಎರಡೂ ದೇಶಗಳು ಹೆಚ್ಚಿನ ಪ್ರಯತ್ನಗಳನ್ನು ಮಾಡಬಹುದಾಗಿದೆ ಎಂದು ಹೇಳಿದರು.
ಈಗ ದ್ವಿಪಕ್ಷೀಯ ವ್ಯಾಪಾರ ಪೂರ್ಣ ಸಾಮರ್ಥ್ಯದ ಒಂದು ಅತಿ ಚಿಕ್ಕ ಭಾಗವಾಗಿದ್ದು, ಇದನ್ನು ಹೆಚ್ಚಿಸಲು ಎರಡೂ ಕಡೆಗಳಿಂದ ಸಾಕಷ್ಟು ಪರಿಶ್ರಮ ಅಗತ್ಯ ಎಂದರು.
ಭಾರತ ಮತ್ತು ಅಮೆರಿಕಗಳ ನಡುವಿನ ವ್ಯಾಪಾರ ಈಗ 10000 ಕೋಟಿ ಡಾಲರ್. ಇದು ಕಳೆದ ಒಂದು ದಶಕದ ಅವಧಿಯಲ್ಲಿ ಐದು ಪಟ್ಟು ಹೆಚ್ಚಿದೆ.
ಮುಂದಿನ ಕೆಲವು ವರ್ಷಗಳಲ್ಲಿ ಇದನ್ನು 50,000 ಕೋಟಿ ಡಾಲರ್‌ಗೆ ಏರಿಸಲು ಒಬಾಮ ಮತ್ತು ಮೋದಿ ಗುರಿಯೊಂದನ್ನು ಹಾಕಿಕೊಂಡಿದ್ದಾರೆ ಎಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.