ಜೊಕೊವಿಕ್, ಬೆರ್ಡಿಕ್, ಫೆಡರರ್ ಕ್ವಾರ್ಟರ್ ಫೈನಲ್‌ಗೆ
ಆಸ್ಟ್ರೇಲಿಯನ್ ಓಪನ್
ಮೆಲ್ಬೋನ್, ಜ.24: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಹಾಗೂ ಝೆಕ್‌ನ ಥಾಮಸ್ ಬೆರ್ಡಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಜೊಕೊವಿಕ್ ಸತತ 27ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ 8ರ ಘಟ್ಟವನ್ನು ತಲುಪಿದ್ದಾರೆ.
ರವಿವಾರ ನಾಲ್ಕು ಗಂಟೆ, 32 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 10 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಅವರು ಫ್ರಾನ್ಸ್‌ನ ಗಿಲ್ಲೆಸ್ ಸೈಮನ್ 6-3, 6-7(1/7), 6-4, 4-6, 6-3 ಸೆಟ್‌ಗಳ ಅಂತರದಿಂದ ಸೋಲಿಸಲು ಸಮರ್ಥರಾದರು. ಜೊಕೊವಿಕ್ ಅಂತಿಮ ಎಂಟರ ಹಂತದಲ್ಲಿ ಜಪಾನ್‌ನ ಕೀ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ.
ಜೊಕೊವಿಕ್‌ಗೆ ಇದು ಪ್ರಯಾಸದ ಗೆಲುವಾಗಿತ್ತು. ಫ್ರಾನ್ಸ್‌ನ 14ನೆ ಶ್ರೇಯಾಂಕದ ಸೈಮನ್ ಭಾರೀ ಹೋರಾಟವನ್ನು ನೀಡಿ ಗಮನ ಸೆಳೆದರು.
ಸತತ 27ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿರುವ ಜೊಕೊವಿಕ್ ಜಿಮ್ಮಿ ಕಾನರ್ಸ್ ದಾಖಲೆಯನ್ನು ಸರಿಗಟ್ಟಿದರು. ಸರ್ಬಿಯದ ಆಟಗಾರ ಜೊಕೊವಿಕ್ ಒಟ್ಟಾರೆ 35ನೆ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಮೆಲ್ಬೋರ್ನ್‌ನಲ್ಲಿ ಸತತ 9ನೆ ಬಾರಿ ಅಂತಿಮ 8ರ ಹಂತವನ್ನು ತಲುಪಿದ ಸಾಧನೆ ಮಾಡಿದ್ದಾರೆ.
ಜೊಕೊವಿಕ್ ಅವರು ಸೈನ್ ವಿರುದ್ಧ ಸತತ 10ನೆ ಗೆಲುವು ಸಾಧಿಸಿದ್ದಾರೆ. ಸೈಮನ್ 2008ರಲ್ಲಿ ಮೊದಲ ಮುಖಾಮುಖಿಯಲ್ಲಿ ಜೊಕೊವಿಕ್‌ರನ್ನು ಮಣಿಸಿದ್ದರು.
ಬೆರ್ಡಿಕ್ ಕ್ವಾರ್ಟರ್ ಫೈನಲ್‌ಗೆ: ವಿಶ್ವದ ನಂ.6ನೆ ಆಟಗಾರ ಥಾಮಸ್ ಬೆರ್ಡಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು, ಮುಂದಿನ ಸುತ್ತಿನಲ್ಲಿ ರೋಜರ್ ಫೆಡರರ್ ಅಥವಾ ಡೇವಿಡ್ ಗಾಫಿನ್‌ರನ್ನು ಎದುರಿಸಲಿದ್ದಾರೆ.
ರವಿವಾರ 3 ಗಂಟೆ, 18 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಝೆಕ್ ಗಣರಾಜ್ಯದ ಬೆರ್ಡಿಕ್ ಅವರು ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್‌ರನ್ನು 4-6, 6-4, 6-3, 1-6, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಈ ಗೆಲುವಿನ ಮೂಲಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಸತತ ಆರನೆ ವರ್ಷ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಬೆರ್ಡಿಕ್ ಕಳೆದ ಎರಡು ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರು 38-12 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ಬೆರ್ಡಿಕ್ ಅವರು ಅಗುಟ್ ವಿರುದ್ಧ ಆಡಿರುವ 6 ಮುಖಾಮುಖಿಯಲ್ಲಿ 4ನೆ ಗೆಲುವು ದಾಖಲಿಸಿದ್ದಾರೆ.
ಫೆಡರರ್ ಕ್ವಾರ್ಟರ್ ಫೈನಲ್‌ಗೆ: ನಾಲ್ಕು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ರವಿವಾರ 4ನೆ ಸುತ್ತಿನ ಪಂದ್ಯದಲ್ಲಿ ಡೇವಿಡ್ ಗಫಿನ್‌ರನ್ನು 6-2, 6-1 6-4 ಸೆಟ್‌ಗಳ ಅಂತರದಿಂದ ಮಣಿಸಿದ ಫೆಡರರ್ ವೃತ್ತಿಜೀವನದಲ್ಲಿ 47ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಫೆಡರರ್ ಮುಂದಿನ ಸುತ್ತಿನಲ್ಲಿ ಝೆಕ್‌ನ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.
ಸೆರೆನಾ ಕ್ವಾರ್ಟರ್‌ಫೈನಲ್‌ಗೆ, ಶರಪೋವಾ ಎದುರಾಳಿ:
ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ರಶ್ಯದ ಶ್ರೇಯಾಂಕರಹಿತ ಮಾರ್ಗರಿಟಾ ಗಾಸ್ಪರ್ಯನ್‌ರನ್ನು 55 ನಿಮಿಷಗಳ ಹೋರಾಟದಲ್ಲಿ 6-2, 6-1 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಅಮೆರಿಕದ ಅಗ್ರ ಶ್ರೇಯಾಂಕದ ಆಟಗಾರ್ತಿ ಸೆರೆನಾ ರಶ್ಯದ ಆಟಗಾರ್ತಿಯನ್ನು ಸುಲಭವಾಗಿ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು. ಸೆರೆನಾ ಮುಂದಿನ ಸುತ್ತಿನಲ್ಲಿ ತನ್ನ ದೀರ್ಘಕಾಲದ ಎದುರಾಳಿ ರಶ್ಯದ ಮರಿಯಾ ಶರಪೋವಾರನ್ನು ಎದುರಿಸಲಿದ್ದಾರೆ.
ಸೆರೆನಾ 2004 ರಿಂದ ಶರಪೋವಾ ವಿರುದ್ಧ ಆಡಿರುವ ಎಲ್ಲ ಪಂದ್ಯಗಳನ್ನು ಜಯಿಸಿದ್ದಾರೆ. ಇದರಲ್ಲಿ ಕಳೆದ ವರ್ಷ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಫೈನಲ್ ಪಂದ್ಯವೂ ಸೇರಿದೆ. ಸೆರೆನಾ ಅವರು ಶರಪೋವಾ ವಿರುದ್ಧ 18-2 ಮುನ್ನಡೆಯಲ್ಲಿದ್ದಾರೆ.
ರಾಂಡ್ವಾಂಸ್ಕಾ ಕ್ವಾರ್ಟರ್ ಫೈನಲ್‌ಗೆ: ಪೊಲೆಂಡ್‌ನ 4ನೆ ಶ್ರೇಯಾಂಕದ ಆಟಗಾರ್ತಿ ಅಗ್ನೆಸ್ಕಾ ರಾಂಡ್ವಾಂಸ್ಕಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ರವಿವಾರ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ರಾಂಡ್ವಾಂಸ್ಕಾ ಅವರು ಜರ್ಮನಿಯ ಶ್ರೇಯಾಂಕರಹಿತ ಅನ್ನಾ-ಲೆನಾ ಫ್ರೈಡ್ಸಮ್‌ರನ್ನು 6-7(6/8), 6-1, 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಗೆಲುವಿನ ಸಂಖ್ಯೆಯನ್ನು 12ಕ್ಕೆ ತಲುಪಿಸಿದರು.