ಅಪ್ಪ-ಅಮ್ಮ-ಮಗ ಒಂದೇ ತರಗತಿಯಲ್ಲಿ!
ನಾಡಿಯಾ, ಜ.26: ಹೆತ್ತವರ ಮರುಳು ಬುದ್ಧಿಯಿಂದಾಗಿ ಅರ್ಧದಲ್ಲೇ ಶಾಲೆ ಬಿಡುವ ಮಕ್ಕಳನ್ನು ನೀವು ನೋಡಿರಬಹುದು. ಆದರೆ, ತಂದೆ ಹಾಗೂ ತಾಯಿ ಶಾಲಾ ಸಮವಸ್ತ್ರ ಧರಿಸಿ ಮಗುವಿನ ತರಗತಿಯಲ್ಲೇ ಕಲಿಯುತ್ತಿರುವುದನ್ನು ಬಹುಶಃ ನೀವು ನೋಡಿರಲಾರಿರಿ!
ನಾಡಿಯಾದ ಧತಾಲ ಪೊಲೀಸ್ ವ್ಯಾಪ್ತಿಯ ಹಜ್ರಾಪುರ ಪ್ರೌಢಶಾಲೆಯಲ್ಲಿ ಮೊಂಡಲ್ ಕುಟುಂಬವನ್ನು ಕಂಡಾಗ ನಿಮ್ಮ ಕಣ್ಣುಗಳನ್ನೇ ನಂಬಲಾರಿರಿ. ವಿಚಿತ್ರರೆಂದರೆ, 11ನೆ ತರಗತಿಯ ವಿದ್ಯಾರ್ಥಿ ವಿಷ್ಲವ್ ಮೊಂಡಲ್ ಎಂಬಾತ, ತನ್ನ ತಂದೆ ಬಲರಾಮ ಮೊಂಡಲ್(41) ಎಂಬವರೊಂದಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರೆ, ತಾಯಿ ಕಲ್ಯಾಣಿ ಮೆಂಡಲ್(31) ಎಂಬವರು ಹುಡುಗಿಯರ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ.
ನಾಡಿಯಾದ ಹಂಸಖಲಿ ಪೊಲೀಸ್ ವ್ಯಾಪ್ತಿಯ ಉತ್ತರ ಪಾಟಿಕಾಬಾರಿಯ ನಿವಾಸಿಗಳಾಗಿರುವ ಮೊಂಡಲ್‌ಗಳು, ಶಾಲಾ ಸಮವಸ್ತ್ರ ತೊಟ್ಟು ತಮ್ಮ ಸೈಕಲ್‌ಗಳಲ್ಲಿ ಶಾಲೆಗೆ ಹೋಗುತ್ತಾರೆ. ಶಾಲೆಯಲ್ಲಿ ಅಧ್ಯಾಪಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಹಪಾಠಿಗಳು ತಲೆಕೆರೆದುಕೊಳ್ಳುತ್ತಿರುವಾಗ ಇವರು, ಉತ್ಕಂಠಿತರಾಗಿ ಕೈ ಎತ್ತುತ್ತಾರೆ. ಮೊಂಡಲ್ ಕುಟುಂಬದ ಮೂವರೂ ಸಹಪಾಠಿಗಳಾಗಿದ್ದರೂ, ಕಲಿಯುವಿಕೆಯ ವಿಚಾರ ಬಂದಾಗ, ಅವರಲ್ಲೇ ಭಾರೀ ಸ್ಪರ್ಧೆ ಏರ್ಪಡುತ್ತದೆ. ಅವರೆಲ್ಲ ಕಲಾ ವಿಭಾಗದಲ್ಲಿದ್ದು, ಸಮಾನ ವಿಷಯಗಳನ್ನು ಅಭ್ಯಸಿಸುತ್ತಿದ್ದಾರೆ.
ಬಲರಾಮ ಹಾಗೂ ಕಲ್ಯಾಣಿ ಕ್ರಮವಾಗಿ 2013 ಹಾಗೂ 2014ರಲ್ಲಿ ಮಾಧ್ಯಮಿಕ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.
ತಾನು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಕಾರಣ, ಕುಟುಂಬ ನಿರ್ವಹಣೆಗಾಗಿ ಅರ್ಧದಲ್ಲೇ ಶಾಲೆ ಬಿಡಬೇಕಾಯಿತು. ಆದರೆ, ತಾನು ಕಲಿಯಬೇಕೆಂಬ ಹಂಬಲವನ್ನು ಎಂದೂ ಕಳೆದುಕೊಂಡಿರಲಿಲ್ಲ. ತಾನು ಪದವೀಧರನಾಗಬೇಕೆಂದಿದ್ದೇನೆಂದು ಬಲರಾಮ ಹೇಳಿದ್ದಾರೆ. ತಾನು 9ನೆ ತರಗತಿಯಲ್ಲಿರುವಾಗಲೇ ತನ್ನ ಮದುವೆಯಾಗಿದ್ದು, ಆದರೆ, ತಾನು ಮುಂದೆ ಓದಬೇಕೆಂಬ ಆಸೆ ಹೊಂದಿದ್ದೇನೆಂದು ಕಲ್ಯಾಣಿ ತಿಳಿಸಿದ್ದಾರೆ.
ತನ್ನ ಹೆತ್ತವರು ತನಗೆ ಸ್ನೇಹಿತರಿದ್ದಂತೆ. ಅವರನ್ನು ಸಹಪಾಠಿಗಳನ್ನಾಗಿ ಪಡೆಯಲು ತಾನು ಪುಣ್ಯ ಮಾಡಿದ್ದೇನೆ. ಈ ಪ್ರಪಂಚದಲ್ಲಿ ಎಷ್ಟು ಮಕ್ಕಳಿಗೆ ಇಂತಹ ಅವಕಾಶ ಲಭಿಸುತ್ತದೆ? ಎಂದು ಬಿಪ್ಲವ್ ಮುಗುಳ್ನಗೆಯೊಂದಿಗೆ ಪ್ರಶ್ನಿಸುತ್ತಾನೆ.
ಬಿಪ್ಲವ್‌ನ ಹೆತ್ತವರು ಶಾಲೆಗೆ ಪ್ರವೇಶ ಪಡೆಯಬೇಕಾದರೆ ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಅವರ ಈ ಭೇಟಿಗಳಿಂದಾಗಿ ಅವರು ನಿಜವಾಗಿಯೂ ಕಲಿಯುವ ಹಂಬಲ ಹೊಂದಿದ್ದಾರೆಂದು ಮನವರಿಕೆಯಾದ ಬಳಿಕ, ಮುಖ್ಯೋಪಾಧ್ಯಾಯ ಸುಜತ್‌ಕುಮಾರ್ ಹೋಟ ಮೊಂಡಲ್ ದಂಪತಿಗೆ ಪ್ರವೇಶ ನೀಡಿದರು. ಈ ವಿಶೇಷ ವಿದ್ಯಾರ್ಥಿಗಳ ಬಗ್ಗೆ ತಾವು ಪ್ರೌಢ ಶಿಕ್ಷಣ ಮಂಡಳಿಗೂ ಮಾಹಿತಿ ನೀಡಿದ್ದೇವೆ. ಮಂಡಳಿಯ ಮಾರ್ಗಸೂಚಿಯಂತೆ ಅವರನ್ನು ಶಾಲೆಗೆ ಸೇರಿಸಿಕೊಳ್ಳಲಾಯಿತೆಂದು ಶಾಲೆಯ ಸಂಸ್ಕೃತ ಅಧ್ಯಾಪಕ ಕಮಲೇಶ್ ಮುಜುಮ್ದಾರ್ ಎಂಬವರು ವಿವರಿಸಿದ್ದಾರೆ.