ಇಂದು ಅಂಡರ್-19 ವಿಶ್ವಕಪ್ ಆರಂಭ
ಢಾಕಾ, ಜ.26: ಐಸಿಸಿ ಆಶ್ರಯದಲ್ಲಿ 11ನೆ ಆವೃತ್ತಿಯ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಬುಧವಾರ ಇಲ್ಲಿ ಆರಂಭವಾಗಲಿದೆ. ಟೂರ್ನಿಯು ಬಾಂಗ್ಲಾದೇಶದ ಐದು ನಗರಗಳಲ್ಲಿ ನಡೆಯಲಿದೆ.
ಈ ಹಿಂದಿನ ಆವೃತ್ತಿಯಂತೆ ಒಟ್ಟು 16 ತಂಡಗಳು ರೌಂಡ್ ರಾಬಿನ್ ಹಾಗೂ ನಾಕೌಟ್ ಮಾದರಿಯಲ್ಲಿ ಸ್ಪರ್ಧಿಸಲಿವೆ. 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ತೇರ್ಗಡೆಯಾಗಲಿವೆ. ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯುತ್ತವೆ. ನಾಲ್ಕು ಗುಂಪುಗಳಲ್ಲಿ ಮೂರು ಹಾಗೂ 4ನೆ ಸ್ಥಾನ ಪಡೆಯುವ ತಂಡ ಪ್ಲೇಟ್ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ.
ಎ ಗುಂಪಿನಲ್ಲಿರುವ ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸುವ ಮೂಲಕ ಟೂರ್ನಿ ಆರಂಭವಾಗಲಿದೆ. ಬಿ ಗುಂಪಿನಲ್ಲಿ 2 ಬಾರಿಯ ಚಾಂಪಿಯನ್ ಪಾಕಿಸ್ತಾನ, ಶ್ರೀಲಂಕಾ, ಕೆನಡಾ ಹಾಗೂ ಅಫ್ಘಾನಿಸ್ತಾನ ತಂಡಗಳಿವೆ.
ಸಿ ಗುಂಪಿನಲ್ಲಿ ಇಂಗ್ಲೆಂಡ್, ಫಿಜಿ, ವೆಸ್ಟ್‌ಇಂಡೀಸ್ ಹಾಗೂ ಝಿಂಬಾಬ್ವೆ, ಡಿ ಗುಂಪಿನಲ್ಲಿ 3 ಬಾರಿಯ ಚಾಂಪಿಯನ್ ಭಾರತ, ಆಸ್ಟ್ರೇಲಿಯ, ನ್ಯೂಝಿಲೆಂಡ್, ನೇಪಾಳ ತಂಡಗಳಿವೆ.
ಅಂಡರ್-19 ವಿಶ್ವಕಪ್ ಯುವ ಆಟಗಾರರಿಗೆ ತಮ್ಮ ಪ್ರತಿಭೆ ತೋರಿಸಲು ಇರುವ ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯ ಮೂಲಕವೇ ಭಾರತದ ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ದ.ಆಫ್ರಿಕದ ಗ್ರೇಮ್ ಸ್ಮಿತ್, ಹಾಶಿಮ್ ಅಮ್ಲ ಸಹಿತ ಹಲವು ಆಟಗಾರರು ಬೆಳಕಿಗೆ ಬಂದಿದ್ದರು.