ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಡಬಲ್ಸ್: ಸಾನಿಯಾ-ಹಿಂಗಿಸ್ ಫೈನಲ್‌ಗೆ
ವೆುಲ್ಬೋರ್ನ್, ಜ.27: ವಿಶ್ವದ ನಂ.1 ಡಬಲ್ಸ್ ಆಟಗಾರ್ತಿಯರಾದ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಸತತ 35ನೆ ಪಂದ್ಯವನ್ನು ಜಯಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಬುಧವಾರ ಇಲ್ಲಿನ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಸೆಮಿ ಫೈನಲ್‌ನಲ್ಲಿ ಇಂಡೋ-ಸ್ವಿಸ್ ಜೋಡಿ ಸಾನಿಯಾ-ಹಿಂಗಿಸ್ ಜರ್ಮನಿ-ಝೆಕ್‌ನ ಜುಲಿಯಾ ಜಾರ್ಜಸ್ ಹಾಗೂ ಕ್ಯಾರೊಲಿನಾ ಪ್ಲಿಸ್‌ಕೋವಾರನ್ನು 6-1, 6-0 ಸೆಟ್‌ಗಳ ಅಂತರದಿಂದ ಸದೆ ಬಡಿದರು.
ಸಾನಿಯಾ-ಹಿಂಗಿಸ್ ಪ್ರಶಸ್ತಿ ಸುತ್ತಿನಲ್ಲಿ ಝೆಕ್‌ನ ಏಳನೆ ಶ್ರೇಯಾಂಕದ ಅಂಡ್ರಿಯಾ ಹ್ಲಾವಾಕೋವಾ ಹಾಗೂ ಲೂಸಿ ಹ್ರಾಡೆಕಾರನ್ನು ಎದುರಿಸಲಿದ್ದು, ಸತತ 8ನೆ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದಾರೆ. ವಿಂಬಲ್ಡನ್ ಹಾಗೂ ಯುಎಸ್ ಓಪನ್ ಚಾಂಪಿಯನ್ ಸಾನಿಯಾ-ಹಿಂಗಿಸ್ ಮೊದಲ ಸೆಟ್‌ನ್ನು ಕೇವಲ 26 ನಿಮಿಷಗಳಲ್ಲಿ ಜಯಿಸಿದರು. ಎರಡನೆ ಸೆಟ್‌ನಲ್ಲೂ ತಮ್ಮ ಪ್ರಾಬಲ್ಯ ಮುಂದುವರಿಸಿದ ವಿಶ್ವದ ನಂ. 1 ಜೋಡಿ ಪಂದ್ಯವನ್ನು 6-1, 6-0 ಸೆಟ್‌ಗಳ ಅಂತರದಿಂದ ಗೆದ್ದುಕೊಂಡರು.
ಸಾನಿಯಾ ಮೆಲ್ಬೋರ್ನ್‌ನಲ್ಲಿ ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶಿಸಿದ್ದಾರೆ. 2012ರಲ್ಲಿ ರಶ್ಯದ ಎಲೆನಾ ವೆಸ್ನಿನಾರೊಂದಿಗೆ ಸೆಮಿ ಫೈನಲ್ ತಲುಪಿದ್ದು ಅವರ ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.