ಶಾಲಾ ಶೌಚಾಲಯದಲ್ಲಿ ಬಾಲಕನ ಶವ ಪತ್ತೆ
ಕೊಯಮತ್ತೂರು, ಜ.27: ಪ್ರಾಥಮಿಕ ವಿದ್ಯಾರ್ಥಿಯೊಬ್ಬನ ಶವ ತಿರುಪುರದ ಸಮೀಪದ ಖಾಸಗಿ ಶಾಲೆಯೊಂದರ ಶೌಚಾಲಯದಲ್ಲಿ ಇಂದು ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
6ರ ಹರೆಯದ ಶಿವರಾಮ್ ಎಂಬ ವಿದ್ಯಾರ್ಥಿ ಶಾಲೆಗೆ ಬಂದ ಬಳಿಕ ಶೌಚಾಲಯಕ್ಕೆ ಹೊಗಿದ್ದನು. ಅವನ ಸಹಪಾಠಿಗಳು ಶಿವರಾಮ ತಲೆಯಲ್ಲಿ ರಕ್ತ ಸುರಿಯುತ್ತಿದ್ದ ಗಾಯಗಳೊಂದಿಗೆ ನೆಲದ ಮೇಲೆ ಬಿದ್ದಿರುವುದನ್ನು ಕಂಡರು. ಈ ವಿಚಾರವನ್ನು ಅವರು ಅಧ್ಯಾಪಕರು ಹಾಗೂ ಪ್ರಿನ್ಸಿಪಾಲರಿಗೆ ತಿಳಿಸಿದರೆಂದು ಪೊಲೀಸರು ಹೇಳಿದ್ದಾರೆ.
ಹುಡುಗನನ್ನು ದಾಖಲಿಸಲಾಗಿದ್ದ ಖಾಸಗಿ ಆಸ್ಪತ್ರೆಗೆ ಆತನ ಹೆತ್ತವರು ಧಾವಿಸಿದರು. ಆದರೆ, ಶಿವರಾಮ ಆಸ್ಪತ್ರೆಗೆ ತರುವ ಮೊದಲೇ ಮೃತಪಟ್ಟಿದ್ದನೆಂದು ವೈದ್ಯರು ಘೋಷಿಸಿದರು.
ಅಧಿಕಾರಿಗಳು ಶಾಲೆಗೆ ಒಂದಿ ದಿನದ ರಜೆ ಘೋಷಿಸಿದ್ದಾರೆ. ಸ್ಥಳದಲ್ಲಿ ಸ್ವಲ್ಪ ಕಾಲ ಉದ್ವಿಗ್ನತೆ ನೆಲೆಸಿದ್ದುದರಿಂದ ಸಾಕಷ್ಟು ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಹುಡುಗನ ಸಾವಿನ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.