×
Ad

ಮೊದಲ ಬಾರಿಯ ಅರ್ಜಿದಾರರಿಗೆ ಮೊದಲು ಪಾಸ್‌ಪೋರ್ಟ್, ಮತ್ತೆ ಪೊಲೀಸ್ ಪರಿಶೀಲನೆ

Update: 2016-01-27 23:54 IST

ಹೊಸದಿಲ್ಲಿ, ಜ.27: ಪಾಸ್‌ಪೋರ್ಟ್ ವ್ಯವಸ್ಥೆಯನ್ನು ಉದಾರಗೊಳಿಸಿರುವ ವಿದೇ ಶಾಂಗ ಸಚಿವೆ ಸುಷ್ಮಾ ಸ್ವರಾಜ್, ಮೊದಲ ಬಾರಿಯ ಸಾಮಾನ್ಯ ವರ್ಗದ ಪಾಸ್‌ಪೋರ್ಟ್ ಅರ್ಜಿದಾರರಿಗೆ ನೀಡಿಕೆ ಪ್ರಕ್ರಿಯೆಯಲ್ಲಿ ಪೊಲೀಸ್ ಪರಿಶೀಲನೆಯನ್ನು ಇಲ್ಲವಾಗಿಸುವ ಸರಕಾರದ ನಿರ್ಧಾರವನ್ನು ಘೋಷಿಸಿದ್ದಾರೆ.

ಅರ್ಜಿದಾರರು, ಸರಕಾರ ನೀಡಿರುವ ಇತರ ಗುರುತು ಪತ್ರಗಳ ಸಹಾಯದಿಂದ ತ್ವರಿತವಾಗಿ ಪಾಸ್‌ಪೋರ್ಟ್ ಪಡೆಯಬಹುದು. ಹೊಸ ವ್ಯವಸ್ಥೆಯು, ಪೊಲೀಸ್ ಪರಿಶೀಲನೆಯನ್ನು ಮುಂದೆಂದಾದರೂ ಮಾಡುವಂತೆ, ಸಾಮಾನ್ಯ ಪಾಸ್‌ಪೋರ್ಟ್‌ಗಳ ನೀಡಿಕೆಗೆ ಆದ್ಯತೆ ನೀಡುತ್ತದೆ. ಯಾವುದೇ ಕ್ರಿಮಿನಲ್ ಪ್ರಕರಣಗಳು ತಮ್ಮ ಮೇಲಿಲ್ಲ ಎಂಬ ಅಫಿದಾವಿತ್‌ನೊಂದಿಗೆ ಆಧಾರ್, ಮತದಾರರ ಗುರುತಿನ ಚೀಟಿ ಹಾಗೂ ಪಾನ್‌ಕಾರ್ಡ್‌ಗಳ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ತಾವು ಪಾಸ್‌ಪೋರ್ಟ್ ನೀಡುತ್ತೇವೆಂದು ಸುಷ್ಮಾ ಟ್ವೀಟಿಸಿದ್ದಾರೆ.

ಆಧಾರ್, ಎಪಿಕ್, ಪಾನ್‌ಕಾರ್ಡ್ ಹಾಗೂ ನಮೂನೆ-1 ಮಾದರಿಯಲ್ಲಿ ಅಫಿದಾವಿತ್‌ನೊಂದಿಗೆ ಸಲ್ಲಿಸಲಾದ ಎಲ್ಲ ಮೊದಲ ಬಾರಿಯ ಅರ್ಜಿದಾರರ ಸಾಮಾನ್ಯ ಪಾಸ್‌ಪೋರ್ಟ್ ಅರ್ಜಿಗಳನ್ನು ಮತ್ತೆ ಪೊಲೀಸ್ ಪರಿಶೀಲನೆ ನಡೆಸುವ ಆಧಾರದಲ್ಲಿ ಸಂಸ್ಕರಿಸಲಾಗುವುದು. ಆದರೆ, ಆಧಾರ್ ಸಂಖ್ಯೆಯ ಆನ್‌ಲೈನ್ ಸ್ಥಿರೀಕರಣ ಯಶಸ್ವಿಯಾಗಿರಬೇಕು ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.

ಪಾಸ್‌ಪೋರ್ಟ್ ಅರ್ಜಿ ಮಾದರಿಯ ನಮೂನೆ-1, ಅರ್ಜಿದಾರನ ‘ಕ್ರಿಮಿನಲ್ ದಾಖಲೆಯಿಲ್ಲ’ ಎಂದು ಘೋಷಿಸುವ ಅಫಿದಾವಿತ್‌ನ ಮಾದರಿಯನ್ನು ಹೊಂದಿರುತ್ತದೆ.

ಅರ್ಜಿದಾರನು ಪಾಸ್‌ಪೋರ್ಟ್ ಪಡೆದ ಮೇಲೆ ನಡೆಸಬಹುದಾದ ಪೊಲೀಸ್ ಪರಿಶೀಲನೆ ಪ್ರಕ್ರಿಯೆಯು, ಪೊಲೀಸ್ ಪರಿಶೀಲನೆ ವರದಿಯ ತ್ವರಿತ ಸಲ್ಲಿಕೆಗಾಗಿ ‘ಎಂ ಪಾಸ್‌ಪೋರ್ಟ್ ಪೊಲೀಸ್ ಆ್ಯಪ್’ನ ಚಾಲನೆಯೊಂದಿಗೆ ಸರಳಗೊಳಿಸಲಾಗಿದೆ.

 ಈ ಆ್ಯಪ್ ಕ್ಷೇತ್ರ ಮಟ್ಟದ ಪರಿಶೀಲನಾಧಿಕಾರಿಗೆ ಪಿವಿ ವರದಿಯನ್ನು ವ್ಯವಸ್ಥೆಗೆ ಸಾಂಖಿಕವಾಗಿ ನೇರ ವರ್ಗಾಯಿಸಲು ಅನುಕೂಲ ಕಲ್ಪಿಸುತ್ತದೆ. ಈ ಆ್ಯಪ್‌ನ ಚಾಲನೆಯಿಂದ, ವೈಯಕ್ತಿಕ ವಿವರ ಫಾರ್ಮ್ ಹಾಗೂ ಪ್ರಶ್ನಾವಳಿಗಳನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆಯುವ ಅಗತ್ಯವಿರುವುದಿಲ್ಲ. ಇದರಿಂದ ಆರಂಭದಿಂದ ಕೊನೆಯವರೆಗೆ ಪಿವಿ ಪ್ರಕ್ರಿಯೆ ಕಾಗದ ರಹಿತ ಸಾಂಖಿಕ ಹರಿವಿನ ಮೂಲಕವೇ ನಡೆಯುತ್ತದೆ. ಹೊಸ ಆ್ಯಪ್ ಪೊಲೀಸ್ ಪರಿಶೀಲನೆ ಪ್ರಕ್ರಿಯೆಯನ್ನು 21 ದಿನಗಳಿಗೆ ಇಳಿಸುತ್ತದೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News