×
Ad

ಇಸ್ರೇಲ್ ವಿರುದ್ಧ ಮೂನ್ ಮತ್ತೆ ವಾಗ್ದಾಳಿ ‘‘ಅತಿಕ್ರಮಣದ ಉಸಿರುಗಟ್ಟಿಸುವ ನೀತಿಗಳಿಂದ ಭ್ರಮನಿರಸನ’’

Update: 2016-01-28 23:22 IST

ವಿಶ್ವಸಂಸ್ಥೆ, ಜ. 28: ‘‘ಫೆಲೆಸ್ತೀನ್ ಭೂಪ್ರದೇಶಗಳನ್ನು ಆಕ್ರಮಣ ಮಾಡಿರುವುದಕ್ಕಾಗಿ’’ ಇಸ್ರೇಲ್ ವಿರುದ್ಧದ ತನ್ನ ವಾಗ್ದಾಳಿಗಳನ್ನು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಬುಧವಾರವೂ ಮುಂದುವರಿಸಿದ್ದಾರೆ.

ಇದಕ್ಕೂ ಒಂದು ದಿನ ಮೊದಲು ತಾನು ಮಾಡಿರುವ ಟೀಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ರೋಶ ವ್ಯಕ್ತಪಡಿಸಿರುವುದನ್ನು ಗಣನೆಗೆ ತೆಗೆದುಕೊಳ್ಳದ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ, ಇಸ್ರೇಲ್ ವಿರುದ್ಧದ ಟೀಕೆಯಿಂದ ತಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಶ್ಚಿಮ ದಂಡೆಯಲ್ಲಿ ಯಹೂದಿ ವಸಾಹತುಗಳು ವಿಸ್ತರಣೆಯಾಗುತ್ತಿರುವುದನ್ನು ವಿರೋಧಿಸಿ ಮೂನ್ ಇಸ್ರೇಲ್ ವಿರುದ್ಧ ಹರಿಹಾಯ್ದಿದ್ದರು.
ಈ ವರ್ಷದ ಕೊನೆಯಲ್ಲಿ ಹುದ್ದೆಯಿಂದ ಕೆಳಗಿಳಿಯುವ ಮೊದಲು ಶಾಂತಿ ಪ್ರಕ್ರಿಯೆಗೆ ವೇದಿಕೆ ಸಿದ್ಧಪಡಿಸುವ ಅಂತಿಮ ಪ್ರಯತ್ನವಾಗಿ ನೆತನ್ಯಾಹು ಮೇಲೆ ಒತ್ತಡ ಹೆಚ್ಚಿಸಲು ಮೂನ್ ಪ್ರಯತ್ನಿಸುತ್ತಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
‘‘ಸುಮಾರು 50 ವರ್ಷಗಳ ಅತಿಕ್ರಮಣದ ಬಳಿಕ, ಓಸ್ಲೊ ಭರವಸೆಗಳು ಈಡೇರುತ್ತವೆ ಎಂದು ದಶಕಗಳ ಕಾಲ ಕಾದ ಬಳಿಕ... ಫೆಲೆಸ್ತೀನೀಯರು ಭರವಸೆ ಕಳೆದುಕೊಳ್ಳುತ್ತಿದ್ದಾರೆ’’ ಎಂದು ವಿಶ್ವಸಂಸ್ಥೆಯ ಫೆಲೆಸ್ತೀನಿಯರ ಹಕ್ಕುಗಳ ಸಮಿತಿಯೊಂದಕ್ಕೆ ಬಾನ್ ಹೇಳಿದರು.
‘‘ವಿಶೇಷವಾಗಿ ಯುವ ಜನರು ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಅತಿಕ್ರಮಣದ ಉಸಿರುಗಟ್ಟಿಸುವ ನೀತಿಗಳಿಂದ ಅವರು ಭ್ರಮನಿರಸನರಾಗಿದ್ದಾರೆ’’ ಎಂದರು.
ಅತಿಕ್ರಮಣದ ವಿರುದ್ಧ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಮಾನವ ಸಹಜ ಗುಣ ಎಂಬ ಮೂನ್ ಹೇಳಿಕೆಗೆ ಇಸ್ರೇಲ್ ಆಕ್ರೋಶ ವ್ಯಕ್ತಪಡಿಸಿತ್ತು. ಮೂನ್ ‘‘ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ’’ ಎಂಬುದಾಗಿ ನೆತನ್ಯಾಹು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News