ಗ್ರೀಸ್: 12 ವಲಸಿಗರ ದೇಹ ಪತ್ತೆ
ಅಥೆನ್ಸ್, ಜ. 28: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗ್ರೀಸ್ ದ್ವೀಪ ಸಮೋಸ್‌ನಲ್ಲಿ ಬುಧವಾರ ಮುಳುಗಿದ್ದು, ಎಂಟು ಮಕ್ಕಳು ಸೇರಿದಂತೆ 12 ಮಂದಿಯ ದೇಹಗಳನ್ನು ಗುರುವಾರ ಮೇಲೆತ್ತಲಾಗಿದೆ ಎಂದು ಗ್ರೀಸ್ ತಟರಕ್ಷಣಾ ಪಡೆ ಹೇಳಿದೆ.
ಇನ್ನೂ 20 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ಈಗಲೂ ಚಾಲ್ತಿಯಲ್ಲಿದೆ. ಈವರೆಗೆ ದುರಂತದಲ್ಲಿ 10 ಮಂದಿ ಬದುಕುಳಿದಿದ್ದಾರೆ.
ಟರ್ಕಿಯಿಂದ ಏಜಿಯನ್ ಸಮುದ್ರದ ಮೂಲಕ ಗ್ರೀಸ್‌ಗೆ ತೆರಳುತ್ತಿದ್ದ ವಲಸಿಗರನ್ನು ಹೊತ್ತಿದ್ದ ದೋಣಿ ಬುಧವಾರ ಮುಳುಗಿತ್ತು.
ಥರುಗುಟ್ಟುವ ಚಳಿಯ ಹೊರತಾಗಿಯೂ ತಮ್ಮ ತಾಯ್ನಡಿನಲ್ಲಿ ತಾಂಡವವಾಡುತ್ತಿರುವ ಹಿಂಸೆಯಿಂದ ತತ್ತರಿಸಿ, ಸಾವಿರಾರು ಮಂದಿ ಅಪಾಯಕಾರಿ ಸಮುದ್ರ ಯಾನದ ಮೂಲಕ ಯುರೋಪ್‌ಗೆ ಪ್ರಯಾಣಿಸುತ್ತಿದ್ದಾರೆ.
ಈ ವರ್ಷ ಈವರೆಗೆ 46,000ಕ್ಕೂ ಅಧಿಕ ಮಂದಿ ಗ್ರೀಸ್‌ಗೆ ಆಗಮಿಸಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದೇ ಅವಧಿಯಲ್ಲಿ ಸುಮಾರು 200 ಮಂದಿ ಸಮುದ್ರ ಪ್ರಯಾಣದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ.