ದೀರ್ಘ ವ್ಯಾಪ್ತಿ ಕ್ಷಿಪಣಿ ಹಾರಾಟಕ್ಕೆ ಉತ್ತರ ಕೊರಿಯ ಕ್ಷಣ ಗಣನೆ?
ಸಿಯೋಲ್, ಜ. 28: ಉತ್ತರ ಕೊರಿಯ ಒಂದು ವಾರದ ಒಳಗೆ ದೀರ್ಘ ವ್ಯಾಪ್ತಿಯ ಕ್ಷಿಪಣಿಯೊಂದನ್ನು ಹಾರಿಸಲು ಸಿದ್ಧತೆ ನಡೆಸುತ್ತಿರುವ ಲಕ್ಷಣಗಳಿವೆ ಎಂದು ಜಪಾನ್‌ನ ಸರಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಜಪಾನ್‌ನ ಕ್ಯೋಡೊ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಉತ್ತರ ಕೊರಿಯದ ಟಾಂಗ್‌ಚಂಗ್-ರಿ ಕ್ಷಿಪಣಿ ಪರೀಕ್ಷಾ ಸ್ಥಾವರದ ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಉತ್ತರ ಕೊರಿಯ ಜನವರಿ 6ರಂದು ತನ್ನ ನಾಲ್ಕನೆ ಪರಮಾಣು ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಆ ದೇಶದ ವಿರುದ್ಧ ಹೊಸದಾಗಿ ದಿಗ್ಬಂಧನೆಗಳನ್ನು ವಿಧಿಸುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರು ಚರ್ಚೆ ನಡೆಸುತ್ತಿರುವಾಗಲೇ, ಅದು ಕ್ಷಿಪಣಿ ಪರೀಕ್ಷೆ ನಡೆಸುತ್ತಿರುವ ಸುದ್ದಿ ಹೊರಬಿದ್ದಿದೆ.
ತನ್ನ ಪರಮಾಣು ಹಾಗೂ ಕ್ಷಿಪಣಿ ಕಾರ್ಯಕ್ರಮಗಳಿಗಾಗಿ ಉತ್ತರ ಕೊರಿಯದ ವಿರುದ್ಧ ಈಗಾಗಲೇ ಅಂತಾರಾಷ್ಟ್ರೀಯ ದಿಗ್ಬಂಧನ ಚಾಲ್ತಿಯಲ್ಲಿದೆ. ಉತ್ತರ ಕೊರಿಯ ತನ್ನ ಕೊನೆಯ ದೀರ್ಘ ವ್ಯಾಪ್ತಿಯ ರಾಕೆಟ್ ಹಾರಾಟವನ್ನು 2012ರಲ್ಲಿ ನಡೆಸಿತ್ತು. ಅಂದು ಸಂಪರ್ಕ ಉಪಗ್ರಹವೆಂದು ಉತ್ತರ ಕೊರಿಯ ಹೇಳಿಕೊಂಡ ವಸ್ತುವೊಂದನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸಲಾಗಿತ್ತು. ಇದು ಅಂತರ್‌ಖಂಡ ಪ್ರಕ್ಷೇಪಕ ಕ್ಷಿಪಣಿ ನಿರ್ಮಾಣ ಪ್ರಯತ್ನದ ಭಾಗವಾಗಿರಬಹುದು ಎಂದು ಪರಿಣತರು ಶಂಕಿಸಿದ್ದಾರೆ.