×
Ad

ಸರಕಾರ, ಜೇಟ್ಲಿ, ಸಿಬಿಐ ವಿರುದ್ಧ ಕೀರ್ತಿ ಕೋರ್ಟ್‌ಗೆ

Update: 2016-01-28 23:49 IST

ಹೊಸದಿಲ್ಲಿ,ಜ.28: ಡಿಡಿಸಿಎಯ ಭ್ರಷ್ಟಾಚಾರದ ವಿರುದ್ಧ ತನ್ನ ಹೋರಾಟದಲ್ಲಿ ಗುರುವಾರ ಮೋದಿ ಸರಕಾರವನ್ನು ಎಳೆದುತಂದ ಅಮಾನತುಗೊಂಡಿರುವ ಬಿಜೆಪಿ ಸಂಸದ ಕೀರ್ತಿ ಆಝಾದ್ ಅವರು, ಸಿಬಿಐ ‘ಪಂಜರದ ಗಿಳಿ’ಯಾಗಿಯೇ ಉಳಿದಿದೆ ಎಂದರಲ್ಲದೆ, ತಾನು ಸರಕಾರ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾನು ಕಳೆದ ವರ್ಷದ ಸೆಪ್ಟಂಬರ್ 13ರಂದು ಜೇಟ್ಲಿಯವರಿಗೆ ಬರೆದಿದ್ದ ಪತ್ರವೊಂದನ್ನು ಬಿಡುಗಡೆಗೊಳಿಸಿದರು. ಡಿಡಿಸಿಎ ಮತ್ತು ಹಾಕಿ ಇಂಡಿಯಾವನ್ನು ಹಾಳುಗೆಡಹುವಲ್ಲಿ ಜೇಟ್ಲಿ ‘ಕುಟಿಲ ಪಾತ್ರ’ವನ್ನು ನಿರ್ವಹಿಸಿದ್ದಾರೆ ಎಂದು ಅವರು ಈ ಪತ್ರದಲ್ಲಿ ಆರೋಪಿಸಿದ್ದಾರೆ.
ಜೇಟ್ಲಿ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದ ಆಝಾದ್, ‘ನೆಚ್ಚಿನ’ಲೆಕ್ಕಪರಿಶೋಧಕರ ಮರು ನೇಮಕಾತಿ ಕುರಿತು ಮತ್ತು ತನ್ನ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಮಾನಹಾನಿ ಪ್ರಕರಣವನ್ನು ದಾಖಲಿಸುವ ಬಗ್ಗೆ ಡಿಡಿಸಿಎ ಪದಾಧಿಕಾರಿಗಳಿಗೆ ಕಳುಹಿಸಿದ್ದ ‘ನಿಗೂಢ ’ಇ-ಮೇಲ್‌ನಲ್ಲಿ ಅವರ ಪಾತ್ರವಿತ್ತು ಎನ್ನುವುದನ್ನು ಬೆಟ್ಟು ಮಾಡಿದರು.
 ಜೇಟ್ಲಿ ವಿರುದ್ಧ ನಿರಂತರ ದಾಳಿಗಳಿಗಾಗಿ ಬಿಜೆಪಿಯು ಆಝಾದ್‌ರನ್ನು ಅಮಾನತುಗೊಳಿಸಿದೆಯಲ್ಲದೆ, ಪಕ್ಷದಿಂದ ಏಕೆ ಉಚ್ಚಾಟಿಸಬಾರದು ಎನ್ನುವುದಕ್ಕೆ ಕಾರಣವನ್ನು ಕೇಳಿ ನೋಟಿಸನ್ನು ಜಾರಿಗೊಳಿಸಿದೆ.
ತಾನು ಪಕ್ಷ ಅಥವಾ ಸರಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿಲ್ಲ, ಹೀಗಾಗಿ ಬಿಜೆಪಿಯು ತನ್ನ ಅಮಾನತು ಆದೇಶವನ್ನು ಹಿಂದೆಗೆದುಕೊಳ್ಳುತ್ತದೆ ಎಂದು ಆಝಾದ್ ಇದೇ ವೇಳೆ ವಿಶ್ವಾಸವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News