ತೀಸ್ತಾಗೆ ನಿರೀಕ್ಷಣಾ ಜಾಮೀನು ವಿಸ್ತರಣೆ
Update: 2016-01-28 23:53 IST
ಹೊಸದಿಲ್ಲಿ, ಜ.28: ನಿಧಿ ದುರ್ಬಳಕೆ ಆರೋಪದ ಸಂಬಂಧ ನಡೆಯುತ್ತಿರುವ ತನಿಖೆಗೆ ಸಹಕರಿಸಿ, ಇಲ್ಲವೇ ಬಂಧನಕ್ಕೆ ಸಿದ್ಧರಾಗಿ ಎಂದು ಸಮಾಜ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ರಿಗೆ ಸುಪ್ರಿಂಕೋರ್ಟ್ ಗುರುವಾರ ತಾಕೀತು ಮಾಡಿದೆ.
ಆದಾಗ್ಯೂ, ಈ ಪ್ರಕರಣದಲ್ಲಿ ತೀಸ್ತಾ ಹಾಗೂ ಪತಿ ಜಾವೇದ್ ಆನಂದ್‌ರ ನಿರೀಕ್ಷಣಾ ಜಾಮೀನನ್ನು ಅದು ಮಾ.18ರವರೆಗೆ ವಿಸ್ತರಿಸಿದೆ.
ತೀಸ್ತಾ ತನಿಖೆಗೆ ಸಹಕಾರ ನೀಡುತ್ತಿಲ್ಲ ಹಾಗೂ ಅಗತ್ಯವಿರುವ ದಾಖಲೆಗಳನ್ನು ಒದಗಿಸುತ್ತಿಲ್ಲವೆಂದು ವಿಚಾರಣೆಯ ವೇಳೆ ಸಿಬಿಐ ಹಾಗೂ ಗುಜರಾತ್ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಸಿಬಿಐಯ ಅಫಿದಾವಿತ್‌ಗೆ ಪಾರವಾರು ಉತ್ತರಿಸುವಂತೆ ತೀಸ್ತಾರಿಗೆ ನ್ಯಾಯಾಲಯ ಆದೇಶಿಸಿದೆ.
ತಾನು ಸಿಬಿಐಯ ಆರೋಪಗಳಿಗೆ ವಾಕ್ಯವಾರು ಉತ್ತರಿಸುವೆನೆಂದು ತೀಸ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.