ಮಧ್ಯ ಪ್ರಾಚ್ಯದಲ್ಲಿ ಹಸಿವೆಯೇ ಯುದ್ಧಾಸ್ತ್ರ!
ಬೆರೂತ್, ಜ. 29: ಯುದ್ಧ ಮತ್ತು ಸಂಘರ್ಷದಿಂದ ಜರ್ಝರಿತಗೊಂಡಿರುವ ಮಧ್ಯ ಪ್ರಾಚ್ಯದಲ್ಲಿ ಹೋರಾಟ ನಿರತರು ಆಹಾರವನ್ನು ಯುದ್ಧಾಸ್ತ್ರವನ್ನಾಗಿ ಬಳಸತೊಡಗಿದ್ದಾರೆ.
ಸಿರಿಯ, ಯಮನ್ ಮತ್ತು ಇರಾಕ್‌ನಂಥ ದೇಶಗಳ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದು, ಬದುಕುಳಿಯಲು ಸಾಹಸ ಪಡುತ್ತಿದ್ದಾರೆ. ಬಾಹ್ಯ ಜಗತ್ತಿನಿಂದ ಅವರಿಗೆ ಯಾವುದೇ ನೆರವು ಬರುತ್ತಿಲ್ಲ.
ಅಸಂಖ್ಯಾತ ಸಂಖ್ಯೆಯ ಮಕ್ಕಳು ತೀರಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ತಮ್ಮ ಮಕ್ಕಳಿಗೆ ನೀರು, ಔಷಧ, ಇಂಧನ ಮುಂತಾದ ಮೂಲ ಆವಶ್ಯಕತೆಗಳನ್ನು ಪೂರೈಸಲು ಹೆತ್ತವರು ಇತರರ ಬಳಿ ಕೈಚಾಚಬೇಕಾಗಿದೆ ಅಥವಾ ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡಬೇಕಾಗಿದೆ.
ಈವರೆಗಿನ ಅತ್ಯಂತ ಬರ್ಬರ ಮಾನವ ನಿರ್ಮಿತ ವಿಪತ್ತು ಸಿರಿಯದಲ್ಲಿ ಸಂಭವಿಸಿದೆ. ಅಲ್ಲಿ ನಡೆದ ಸುದೀರ್ಘ ಐದು ವರ್ಷಗಳ ಭೀಕರ ಅಂತರ್ಯುದ್ಧದಲ್ಲಿ ಈವರೆಗೆ ಸುಮಾರು ಎರಡೂವರೆ ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಅರ್ಧದಷ್ಟು ಜನರು ನಿರ್ವಸಿತರಾಗಿದ್ದಾರೆ.
ಸಂಘರ್ಷದಲ್ಲಿ ನಿರತವಾಗಿರುವ ಎಲ್ಲ ಬಣಗಳು ಎದುರು ಬಣವನ್ನು ಮಣಿಸುವುದಕ್ಕಾಗಿ ದಿಗ್ಬಂಧನೆ ತಂತ್ರವನ್ನು ಬಳಸುತ್ತಿವೆ. ಈ ತಂತ್ರಗಾರಿಕೆ ಯಶಸ್ವಿಯೂ ಆಗಿದೆ. ರಾಜಧಾನಿ ಡಮಾಸ್ಕಸ್‌ನ ಸುತ್ತಲಿನ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಂಡುಕೋರರನ್ನು ಮಣಿಸಲು ಸರಕಾರಿ ಪಡೆಗಳು ಈ ತಂತ್ರವನ್ನು ಬಳಸುತ್ತಿವೆ.
ರಶ್ಯ ನಡೆಸಿದ ವಾಯು ದಾಳಿಗಳು ಹಾಗೂ ಚಳಿಯಿಂದ ಅಕ್ಟೋಬರ್ ಬಳಿಕ ಸಿರಿಯದಲ್ಲಿ ಬೃಹತ್ ಮಾನವೀಯ ಬಿಕ್ಕಟ್ಟು ತಲೆದೋರಿದೆ. ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ಜನರು ಹಸಿವೆಯಿಂದ ಮೃತಪಟ್ಟಿದ್ದಾರೆ.
ಹೃದಯ ಕಲಕುವ ಪರಿಸ್ಥಿತಿ: ಮೂನ್
ಇತ್ತೀಚೆಗೆ ಮುತ್ತಿಗೆಗೊಳಗಾದ ಸಿರಿಯ ಪಟ್ಟಣವೊಂದನ್ನು ಪ್ರವೇಶಿಸಿದ ಮಾನವೀಯ ಪರಿಹಾರ ತಂಡಗಳು, ಹೃದಯ ಕಲಕುವ ಅತ್ಯಂತ ದಯನೀಯ ಪರಿಸ್ಥಿತಿಗಳನ್ನು ಕಂಡಿವೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.
ಅಧ್ಯಕ್ಷ ಬಶರ್ ಅಸ್ಸಾದ್ ಸರಕಾರ ಮತ್ತು ಅವರನ್ನು ಕಿತ್ತೊಗೆಯಲು ಹೋರಾಡುತ್ತಿರುವ ಬಂಡುಕೋರರು ಹಸಿವೆಯನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಅವರು, ಇದು ಯುದ್ಧಾಪರಾಧ ಎಂಬುದಾಗಿ ಬಣ್ಣಿಸಿದ್ದಾರೆ.