ಟ್ವೆಂಟಿ-20: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಸರಣಿ
ಆಸ್ಟ್ರೇಲಿಯಕ್ಕೆ ಗರ್ವಭಂಗ
ಮೆಲ್ಬೋರ್ನ್, ಜ.29: ಮೂರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವನ್ನು 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿರುವ ಭಾರತದ ಮಹಿಳಾ ಕ್ರಿಕೆಟ್ ತಂಡ ಚೊಚ್ಚಲ ಟ್ವೆಂಟಿ-20 ಸರಣಿಯನ್ನು ಮುಡಿಗೇರಿಸಿಕೊಂಡಿದೆ.
ಈ ಮೂಲಕ ಹೊಸ ಇತಿಹಾಸ ಬರೆದಿದೆ. ಶುಕ್ರವಾರ ಇಲ್ಲಿ ನಡೆದ ಮಳೆ ಬಾಧಿತ ಪಂದ್ಯವನ್ನು ಸುಲಭವಾಗಿ ಜಯಿಸಿರುವ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಮೂರನೆ ಹಾಗೂ ಅಂತಿಮ ಪಂದ್ಯ ಜ.31 ರಂದು ಸಿಡ್ನಿಯಲ್ಲಿ ನಡೆಯಲಿದೆ.
ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು 18 ಓವರ್‌ಗೆ ಕಡಿತಗೊಳಿಸಲಾಯಿತು. ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿದ್ದ ಭಾರತ ಮೋಡ ಕವಿದ ವಾತಾವರಣದ ಲಾಭ ಪಡೆದು ಆಸ್ಟ್ರೇಲಿಯವನ್ನು 125 ರನ್‌ಗೆ ನಿಯಂತ್ರಿಸಿತು.
ಆಸ್ಟ್ರೇಲಿಯ 5ನೆ ಓವರ್‌ಗೆ 33 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಆಗ 4ನೆ ವಿಕೆಟ್‌ಗೆ 70 ರನ್ ಜೊತೆಯಾಟ ನಡೆಸಿದ ಆಸೀಸ್ ನಾಯಕಿ ಮೆಗ್ ಲಾನ್ನಿಂಗ್(49) ಹಾಗೂ ಜೆಸ್ಸ್ ಜಾನಸ್ಸನ್(27) ತಂಡವನ್ನು ಆಧರಿಸಿದರು. ಲಾನ್ನಿಂಗ್ ರನೌಟಾದ ಬಳಿಕ ಆಸೀಸ್‌ನ ವಿಕೆಟ್ ಪತನ ಆರಂಭವಾಯಿತು.
ಭಾರತದ ಪರ ವೇಗದ ಬೌಲರ್ ಜುಲನ್ ಗೋಸ್ವಾಮಿ(2-16) ಹಾಗೂ ಲೆಗ್-ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್(2-27) ತಲಾ 2 ವಿಕೆಟ್ ಕಬಳಿಸಿದರು.
ಸುಲಭ ಸವಾಲು ಪಡೆದಿದ್ದ ಭಾರತ 7.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿಯಿತು. ಆಗ ಗೆಲುವಿನ ಗುರಿಯನ್ನು 10 ಓವರ್‌ಗೆ 66 ರನ್‌ಗೆ ಪರಿಷ್ಕರಿಸಲಾಯಿತು.
ನಾಯಕಿ ಮಿಥಾಲಿ ರಾಜ್ (ಔಟಾಗದೆ 37 ರನ್) ಹಾಗೂ ಸ್ಮತಿ ಮಂದಾನ(ಔಟಾಗದೆ 22)9.1 ಓವರ್‌ಗಳಲ್ಲಿ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.