×
Ad

ಸೋಲಾರ್ ಹಗರಣ: ಕೇರಳ ಮುಖ್ಯಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

Update: 2016-01-29 23:45 IST

ಸಿಎಂ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಧೀಶ ಸ್ವಯಂ ನಿವೃತ್ತಿ

ತಿರುವನಂತಪುರ, ಜ.29: ಸೋಲಾರ್ ಹಗರಣದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ವಿದ್ಯುತ್ ಸಚಿವ ಅರ್ಯಾಡನ್ ಮುಹಮ್ಮದ್ ಅವರ ವಿರುದ್ಧ ಎಫ್‌ಐಆರ್ ದಾಖಲಿ ಸುವಂತೆ ಕೆಳ ನ್ಯಾಯಾಲಯದ ಆದೇಶಕ್ಕೆ ಕೇರಳ ಉಚ್ಚ ನ್ಯಾಯಾ ಲಯವು ಶುಕ್ರವಾರ ಎರಡು ತಿಂಗಳ ತಡೆಯಾಜ್ಞೆ ನೀಡಿದೆ,ತನ್ಮೂಲಕ ರಾಜ್ಯದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರ ಮತ್ತು ಮುಖ್ಯಮಂತ್ರಿಗೆ ನಿರಾಳತೆಯನ್ನು ಒದಗಿಸಿದೆ.

ಸೋಲಾರ ಹಗರಣ ಪ್ರಕರಣದ ಎರಡನೆ ಆರೋಪಿ ಸರಿತಾ ನಾಯರ್ ಬುಧವಾರ ಚಾಂಡಿ ವಿರುದ್ಧ ಲಂಚದ ಆರೋಪವನ್ನು ಹೊರಿಸಿದ್ದರು. ಚಾಂಡಿಯವರಿಗಾಗಿ ತಾನು ಥಾಮಸ್ ಕುರುವಿಲ್ಲಾ ಎಂಬಾತನಿಗೆ 1.90 ಕೋ.ರೂ. ಹಸ್ತಾಂತರಿಸಿದ್ದೆ,ಅರ್ಯಾಡನ್‌ಗೂ 40 ಲಕ್ಷ ರೂ. ಲಂಚ ನೀಡಿದ್ದೆ ಎಂದು ಸರಿತಾ ನ್ಯಾ.ಜಿ.ಶಿವರಾಮನ್ ನೇತೃತ್ವದ ವಿಚಾರಣಾ ಆಯೋಗದೆದುರು ಹೇಳಿಕೆ ನೀಡಿದ್ದಳು.

ಈ ಹೇಳಿಕೆಯ ಆಧಾರದಲ್ಲಿ ಸಾಮಾಜಿಕ ಕಾರ್ಯಕರ್ತ ಪಿ.ಡಿ.ಜೋಸೆಫ್ ಅವರು ಬುಧವಾರ ತೃಶ್ಶೂರಿನ ವಿಚಕ್ಷಣಾ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು ಮತ್ತು ಚಾಂಡಿ ಹಾಗೂ ಅರ್ಯಾಡನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯವು ಆದೇಶಿಸಿತ್ತು.

ತನ್ಮಧ್ಯೆ,ಚಾಂಡಿ ರಾಜೀನಾಮೆಗೆ ಆಗ್ರಹಿಸಿ ಡಿವೈಎಫ್‌ಐ ಕಾರ್ಯಕರ್ತರು ನಡೆಸಿದ ಭಾರೀ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಚಾಂಡಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ಕೂಡ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿತು.

ಹಗರಣಕ್ಕೆ ಸಂಬಂಧಿಸಿದಂತೆ ಚಾಂಡಿ ಸೋಮವಾರ ವಿಚಾರಣಾ ಆಯೋಗದೆದುರು ಹಾಜರಾಗಿದ್ದರು.

♦♦♦


ಸಿಎಂ ವಿರುದ್ಧ ತೀರ್ಪು ನೀಡಿದ್ದ ನ್ಯಾಯಾಧೀಶ ಸ್ವಯಂ ನಿವೃತ್ತಿ

ತಿರುವನಂತಪುರ,ಜ.29: ಸೋಲಾರ್ ಹಗರಣ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ವಿದ್ಯುತ್ ಸಚಿವ ಅರ್ಯಾಡನ್ ಮೊಹಮ್ಮದ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತನ್ನ ಆದೇಶಕ್ಕೆ ಕೇರಳ ಉಚ್ಚ ನ್ಯಾಯಾಲಯವು ತಡೆ ನೀಡಿರುವ ಮತ್ತು ತನ್ನ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ತೃಶ್ಶೂರಿನ ವಿಚಕ್ಷಣಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್.ಎಸ್.ವಾಸನ್ ಅವರು ಸೇವೆಯಿಂದ ಸ್ವಯಂ ನಿವೃತ್ತಿಗೆ ಅನುಮತಿ ಕೋರಿದ್ದಾರೆ.

ವಿಚಕ್ಷಣಾ ನ್ಯಾಯಾಲಯದ ನ್ಯಾಯಾಧೀಶರು ತನ್ನ ಅಧಿಕಾರದ ಸ್ವರೂಪ ಮತ್ತು ವ್ಯಾಪ್ತಿಯನ್ನು ತಿಳಿದುಕೊಳ್ಳದೆ ಯಾಂತ್ರಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಉಚ್ಚ ನ್ಯಾಯಾಲಯವು ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ನ್ಯಾ.ವಾಸನ್ ವಿರುದ್ಧ ಕ್ರಮವನ್ನು ಕೈಗೊಳ್ಳುವ ಬಗ್ಗೆ ಪರಿಶೀಲಿಸುವಂತೆಯೂ ಅದು ಆಡಳಿತಾತ್ಮಕ ವಿಭಾಗಕ್ಕೆ ಆದೇಶಿಸಿತ್ತು. ಹಳ್ಳಿಗನಾಗಿರಲಿ ಅಥವಾ ಮುಖ್ಯಮಂತ್ರಿಯಾಗಿರಲಿ... ಕಾನೂನಿನೆದುರು ಎಲ್ಲರೂ ಸಮಾನರು ಎಂದೂ ನ್ಯಾ.ವಾಸನ್ ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News