ಕಾಲ್‌ಡ್ರಾಪ್ ದೂರು ಹೆಚ್ಚಳ ಗರ್ಗ್ ಎತ್ತಂಗಡಿಗೆ ಕಾರಣ
Update: 2016-01-29 23:59 IST
ಹೊಸದಿಲ್ಲಿ, ಜ.29: ಕಾಲ್ ಡ್ರಾಪ್ ನಿಭಾವಣೆ ವೈಫಲ್ಯ, ಬ್ರಾಡ್ ಬ್ಯಾಂಡ್ ಜಾಲ ಭಾರತ್‌ನೆಟ್ ಆರಂಭಿಸಲು ವಿಳಂಬ ನೆಟ್ ನ್ಯೂಟ್ರಾಲಿಟಿಯಲ್ಲಿ ಸ್ಟಷ್ಟತೆಯ ಕೊರತೆ ದೂರ ಸಂಪರ್ಕ ಕಾರ್ಯದರ್ಶಿ ರಾಕೇಶ್ ಗರ್ಗ್ ಶುಕ್ರವಾರ ಎತ್ತಂಗಡಿಯಾಗಲು ಕಾರಣವೆನ್ನಲಾಗಿದೆ.
ಕಾಲ್ ಡ್ರಾಪ್ ಸಮಸ್ಯೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿತ್ತು. ಅವರದನ್ನು ಗರ್ಗ್‌ರೊಂದಿಗಿನ ಭೇಟಿಯ ವೇಳೆ ಎರಡು ಬಾರಿ ಉಲ್ಲೇಖಿಸಿದ್ದರು. ದೂರ ಸಂಪರ್ಕ ಸಚಿವ ರವಿಶಂಕರ ಪ್ರಸಾದ್, ಪ್ರಮುಖ ವಿಷಯಗಳಲ್ಲಿ ಗರ್ಗ್‌ರ ಕಾರ್ಯಾಚರಣೆಯ ವೇಗದ ಬಗ್ಗೆ ಅಸಮಾಧಾನ ಹೊಂದಿದ್ದರೆಂದು ಸಂಚಾರ ಭವನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಕಾರದ ಮಹತ್ತ್ವಾಕಾಂಕ್ಷಿ ಬ್ರಾಡ್‌ಬ್ಯಾಂಡ್ ಜಾಲ ಯೋಜನೆ- ಭಾರತ್‌ನೆಟ್‌ಗೆ ಶೀಘ್ರವೇ ಚಾಲನೆ ನೀಡುವ ಸಚಿವರ ಬಹಳಷ್ಟು ಆಶ್ವಾಸನೆಗಳ ಹೊರತಾಗಿಯೂ, ಗರ್ಗ್ ವಾರದ ಗುರಿಯನ್ನು ಮುಟ್ಟಲು ವಿಫಲರಾಗಿದ್ದರೆಂದು ಮೂಲಗಳು ಹೇಳಿವೆ. ಹಲವು ಬಾರಿ ಪ್ರಯತ್ನಿಸಿದರೂ ಗರ್ಗ್ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.