ಭಾರತ ವಿಶ್ವಗುರು ಯಾವುದರಲ್ಲಿ?
ಮಾನ್ಯರೇ,
‘ಭಾರತ ವಿಶ್ವಗುರು ಆಗುತ್ತಿದೆ’, ‘ಇಡೀ ಜಗತ್ತೇ ಭಾರತದತ್ತ ಬೆರಗು ಕಣ್ಣಿಂದ ನೋಡುತ್ತಿದೆ’, ‘ಜಗತ್ತಿನವರೆಲ್ಲಾ ಭಾರತದ ಸನಾತನ ಸಂಸ್ಕೃತಿಯಿಂದ ಆಕರ್ಷಿತರಾಗಿದ್ದಾರೆ’, ‘ಜಗತ್ತಿನ ಎಲ್ಲ ಜ್ಞಾನ-ವಿಜ್ಞಾನಗಳಿಗೆ ಭಾರತವೇ ಮೂಲ!’ - ಈ ಎಲ್ಲ ಉದ್ಘಾರವಾಚಕಗಳು ಇತ್ತೀಚಿನ ಒಂದೂವರೆ ವರ್ಷದಿಂದ ವಿಪರೀತವಾಗಿ ಕೇಳಿಬರುತ್ತಿವೆ. ಈ ಉದ್ಘೋಷಗಳ ಮೂಲ ಎಲ್ಲಿದೆ ಗೊತ್ತೇ? ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಈ ಎಲ್ಲಾ ಸ್ವ-ಪ್ರಶಂಸೆ ವಾಕ್ಯಗಳನ್ನು ಹೆಣೆದು ಎಲ್ಲಾ ಭಾಷೆಯಲ್ಲಿ ಅನುವಾದಿಸಿ ಭಾರತದೆಲ್ಲೆಡೆಯ ತಮ್ಮ ಶಾಖೆಗಳಿಗೆ ಕಳುಹಿಸಿ ಕೊಟ್ಟು ಇವೇ ವಾಕ್ಯಗಳನ್ನು ಎಲ್ಲಾ ಸಭೆ ಸಮಾರಂಭಗಳಲ್ಲಿ ಭಾಷಣಕಾರರು ತಮ್ಮ ತಮ್ಮ ಭಾಷೆಗಳಲ್ಲಿ ಅಡಿಗಡಿಗೆ ಉರು ಹೊಡೆಯುವಂತೆ ನೋಡಿಕೊಳ್ಳಬೇಕು ಎಂಬುದಾಗಿ ‘ಸಂಬಂಧಿಸಿದವರು’ ಆದೇಶ ನೀಡಿದ್ದಾರೆ.
ಆದರೆ ಭಾರತ ಈ ಕೆಳಗಿನ ವಿಷಯಗಳಲ್ಲಿ ಮಾತ್ರ ವಿಶ್ವಗುರು ಆಗಿರಲು ಸಾಧ್ಯ ಎಂದು ಹೆಚ್ಚಿನ ಪ್ರಜ್ಞಾವಂತರ ಅಭಿಪ್ರಾಯ. ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಹೀನ ಜಾತಿಯ ವ್ಯವಸ್ಥೆಯಲ್ಲಿ ನಾವು ವಿಶ್ವದ ಏಕಮೇವ ಗುರು ನಿಜ, ಅತೀ ಕೀಳು ಜಾತಿಯ ಶೋಷಣೆಯಲ್ಲಿ ಭಾರತವೇ ವಿಶ್ವಗುರು ನಿಜ. ಕೋಮುವಾದದಲ್ಲಿ ನಾವು ವಿಶ್ವಗುರು, ರೈತರ ಶೋಷಣೆಯಲ್ಲಿ ನಾವು ವಿಶ್ವಗುರು. ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಸ್ತ್ರೀ-ಶೋಷಣೆಯಲ್ಲಿ ನಾವು ವಿಶ್ವಗುರು, ಹೆಣ್ಣು ಭ್ರೂಣಹತ್ಯೆಯಲ್ಲೂ ನಾವೇ ವಿಶ್ವಗುರು, ಜನರ ಆಹಾರ ಪದ್ಧ್ದತಿಯ ವಿಷಯದಲ್ಲಿ ವೈಷಮ್ಯ ಹರಡುವುದರಲ್ಲಿ ನಾವು ವಿಶ್ವದ ಏಕೈಕ ಗುಗ್ಗುರು ಎಂಬುದೂ ನಿಜ. ಲೋಕ-ಕಲ್ಯಾಣ ಲೋಕ-ಶಾಂತಿಗಾಗಿ ಪೂಜೆ ಹೋಮ ಹವನ ಎಂದು ನಾಟಕವಾಡಿ ಜನರನ್ನು ಮಂಗ ಮಾಡಿ ಕೋಟಿಗಟ್ಟಲೆ ಹಣ ಮಾಡುವುದರಲ್ಲೂ ನಾವು ವಿಶ್ವಗುರು ನಿಜ. ನೂರಾರು ಹಬ್ಬಹರಿದಿನಗಳ ಹೆಸರಲ್ಲಿ ಕೆಲಸಗಳ್ಳರಾಗಿ ಮೆರೆಯುವುದರಲ್ಲೂ ನಾವು ವಿಶ್ವಗುರು, ಘೋರ ಮೂಢ ನಂಬಿಕೆಗಳ ವಿಷಯದಲ್ಲೂ ನಾವೇ ವಿಶ್ವಗುರು, ಭ್ರಷ್ಟಾಚಾರದಲ್ಲಂತೂ ನಾವೇ ವಿಶ್ವಗುರುಗಳು, ಸನ್ಯಾಸಿಗಳ ಆಷಾಢಭೂತಿತನ ಹಾಗೂ ಒಣ ಆಡಂಬರದಲ್ಲೂ ನಾವು ವಿಶ್ವಗುರುಗಳು. ಹಾಗಾಗಿ ನಾವು ಅನಾದಿ ಕಾಲದಿಂದ ವಿಶ್ವಗುರು ಆಗಿದ್ದೇವೆ ಎಂಬುದಂತೂ ತ್ರಿಕಾಲ ಸತ್ಯ.
ಇತ್ತೀಚೆಗೆ ನಡೆದ ಒಂದು ಸರ್ವೇಯ ಪ್ರಕಾರ ಭಾರತದಲ್ಲಿ ಸುಮಾರು ಐದು ಕೋಟಿ ಜನ ಸೋಮಾರಿಗಳು ಯಾವೊಂದು ಕೆಲಸ ಮಾಡದೇ ಕೇವಲ ದೇವರು-ಧರ್ಮದ ಹೆಸರಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರಂತೆ. ಜಗತ್ತಿನಲ್ಲಿ ಬೇರೆಲ್ಲಿಯೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನರು ಕೆಲಸ ಮಾಡದೇ ಅನುತ್ಪಾದಕವಾಗಿ ಕುಳಿತು ತಿನ್ನುವ ಸಮಾಜ ಸೃಷ್ಟಿಯಾಗಿಲ್ಲ. ಈ ಐದು ಕೋಟಿ ಜನರು ದಿನಾಲೂ ಏನಾದರೊಂದು ನೆಪದಲ್ಲಿ ‘‘ಭಾರತ ವಿಶ್ವಗುರು ಆಗಿದೆ, ಜಗತ್ತೆಲ್ಲಾ ಭಾರತದತ್ತ ಬೆರಗು ಕಣ್ಣಿಂದ ನೋಡುತ್ತಿದೆ’’ ಎಂದು ಬಡಬಡಿಸುತ್ತಾ ಇರುತ್ತಾರೆ. ಸೋಮಾರಿಗಳು ಹೀಗೆ ಬಡಾಯಿ ಕೊಚ್ಚಿದ ಮಾತ್ರಕ್ಕೆ ಯಾರಾದರೂ ನಿಜವಾಗಿ ವಿಶ್ವಗುರು ಆಗಲು ಸಾಧ್ಯವೇ?
-ಹರೀಶ್ ಎಂ.ಆರ್., ಸಗರಿ-ಕುಂಜಿಬೆಟ್ಟು, ಉಡುಪಿ