ಪ್ರಶಸ್ತಿಗಳು ಸಮರ್ಥರಿಗೆ ಸಿಗುವಂತಾಗಲಿ
ಮಾನ್ಯರೆ,
ಇಂದು ಪ್ರಶಸ್ತಿಗಳು ತನ್ನ ಗೌರವವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಅನರ್ಹರು ಪ್ರಶಸ್ತಿ ಪಡೆದು ಪ್ರಶಸ್ತಿಗಳು ನಗೆಪಾಟಲಿಗೀಡಾಗುತ್ತಿವೆ. ಸಾಮಾಜಿಕ ತಾಣಗಳಲ್ಲಿ ಪ್ರಶಸ್ತಿ ಜನತೆ ನೀಡಿದವರನ್ನು ಪ್ರಶ್ನಿಸಲಾರಂಭಿಸಿದ್ದಾರೆ.
ನಮ್ಮ ದೇಶದ ಸರ್ವೋಚ್ಚ ಪ್ರಶಸ್ತಿಗಳನ್ನು ಸಮರ್ಥರಿಗೆ ಕೊಟ್ಟು ರಾಷ್ಟ್ರದ ಗೌರವವನ್ನು ಕಾಪಾಡಬೇಕಾಗಿದೆ. ಸಾಧಕರು ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗದೆ ಪ್ರಶಸ್ತಿಗಳು ಸಾಧಕರನ್ನು ಹುಡುಕಿಕೊಂಡು ಬರುವಂತಾಗಬೇಕು. ಆಗ ಭಾರತವು ‘ಪ್ರಕಾಶಿಸ’ಬಹುದೇನೋ.
ಭಾರತದ ಸ್ವಾತಂತ್ರ್ಯ ಇತಿಹಾಸ ತಿಳಿದವರು, ಭಾರತೀಯತೆಯನ್ನು, ಎಲ್ಲಾ ಜಾತಿಗಳನ್ನು ಮತ್ತು ಸಂವಿಧಾನವನ್ನು ಗೌರವಿಸುವವರು, ರಾಷ್ಟ್ರೀಯತೆಯ ಬುಡಕ್ಕೆ ತನ್ನ ಸುಳ್ಳಿನ ವಾದದಿಂದ ಕೊಡಲಿಯೇಟು ನೀಡದಂತಹ ವ್ಯಕ್ತಿಗಳನ್ನು ಪ್ರಶಸ್ತಿ ಅರ್ಹತೆಯ ಮಾನದಂಡ ಮಾಡಬೇಕು.
ಅಧಿಕಾರ ಇಂದು ಒಬ್ಬರಲ್ಲಿದ್ದರೆ ನಾಳೆ ಇನ್ನೊಬ್ಬರಲ್ಲಿರುತ್ತದೆ. ಆದರೆ ಹೋದ ದೇಶದ ಮಾನ ಮರಳಿಬಾರದು.
- ಖಾದರ್ ಕೆನರಾ, ಪುತ್ತೂರು