3 ತಿಂಗಳಲ್ಲಿ ಪಟೇಲರ ಸಮಸ್ಯೆ ಬಗೆಹರಿಸಿ, ಇಲ್ಲವೇ ಸಿಎಂ ಕುರ್ಚಿ ಬಿಡಿ : ಆನಂದಿಬೆನ್ ಗೆ ಬಿಜೆಪಿ ಸೂಚನೆ
ಹೊಸದಿಲ್ಲಿ , ಜ 30:ಪಟೇಲರ ಚಳವಳಿಯ ಬಳಿಕ ಹಳಿ ತಪ್ಪಿರುವ ರಾಜ್ಯದ ಆಡಳಿತವನ್ನು ನಿಯಂತ್ರಣಕ್ಕೆ ತರಲು ಹೆಣಗುತ್ತಿರುವ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಗೆ ಬಿಜೆಪಿ ಸ್ಪಷ್ಟ ಸೂಚನೆ ನೀಡಿದೆ. ಅದೇನೆಂದರೆ ಮೂರು ತಿಂಗಳೊಳಗೆ ಪತಿದಾರ್ ( ಪಟೇಲರ ) ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಸಿಎಂ ಕುರ್ಚಿ ಬಿಡಬೇಕು !
ಕಳೆದ ಏಳು ತಿಂಗಳಿಂದ ನಡೆಯುತ್ತಿರುವ ಪಟೇಲರ ಚಳವಳಿ ಈಗಾಗಲೇ ಸಾಕಷ್ಟು ಸುದೀರ್ಘ ಎಳೆದುಕೊಂಡು ಬಂದಿದ್ದು ಅದನ್ನು ತಕ್ಷಣ ಬಗೆಹರಿಸಿ ಮುಗಿಸಬೇಕು. ಇಲ್ಲದಿದ್ದಲ್ಲಿ ಅದು ಪಕ್ಷಕ್ಕೆ ದೊಡ್ಡ ಹಾನಿ ಮಾಡಲಿದೆ ಎಂದು ಬಿಜೆಪಿ ಹಾಗು ಆರೆಸ್ಸೆಸ್ ಮೂಲಗಳು ಆನಂದಿಬೆನ್ ಗೆ ತಿಳಿಸಿವೆ.
ಇತ್ತೀಚಿಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ 31 ರಲ್ಲಿ 23 ಜಿಲ್ಲಾ ಪಂಚಾಯತ್ಗಳನ್ನು ಹಾಗು 193 ರಲ್ಲಿ 113 ತಾಲೂಕು ಪಂಚಾಯತ್ಗಳನ್ನು ಕಾಂಗ್ರೆಸ್ ಗೆದ್ದಿರುವುದು ಬಿಜೆಪಿ ವರಿಷ್ಟರ ನಿದ್ದೆಗೆಡಿಸಿದೆ. ಹೀಗೇ ಮುಂದುವರಿದರೆ 2017 ರಲ್ಲಿ ಗುಜರಾತ್ ಬಿಜೆಪಿ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ ಎಂದು ಅಲ್ಲಿಂದ ಪಕ್ಷಕ್ಕೆ ವರದಿ ಬಂದಿದೆ.
ಹಾಗಾದಲ್ಲಿ ಅದು ಕೇವಲ ಚುನಾವಣಾ ಸೋಲಾಗುವುದಿಲ್ಲ. ಇಡೀ ದೇಶದಲ್ಲಿ ಮೋದಿ ಟೀಕಾಕಾರರಿಗೆ ಬಹು ದೊಡ್ಡ ಅಸ್ತ್ರ ಸಿಕ್ಕಂತಾಗುತ್ತದೆ. ಆದ್ದರಿಂದ ಗುಜರಾತ್ ಕೈತಪ್ಪಿ ಹೋಗಲು ಯಾರನ್ನೂ ಬೇಕಾದರೂ ಕೈಬಿಡಲು ಬಿಜೆಪಿ ತಯಾರಿದೆ . ಅದಕ್ಕೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಬಿಜೆಪಿ ಯೋಚನೆ .