×
Ad

ಕಾಳಸಂತೆಯಲ್ಲಿ 25 ಸಾವಿರ ಎಂಬಿಬಿಎಸ್ ಸೀಟು ಮಾರಾಟ!

Update: 2016-01-30 20:29 IST

ಹೊಸದಿಲ್ಲಿ ಜ30: ದೇಶದ ಯಾವುದೇ ಐಐಟಿ ಅಥವಾ ಎಐಐಎಂಎಸ್‌ಗಳಿಗೆ ನೇರ ಪ್ರವೇಶಾತಿ ನೀಡುವ ಯಾವುದೇ ಜಾಹೀರಾತುಗಳನ್ನು ಅಥವಾ ಈ ಅತ್ಯುನ್ನತ ಸಂಸ್ಥೆಗಳಿಗೆ ಮುಂಗಡವಾಗಿ ಸೀಟು ಕಾಯ್ದಿರಿಸುವಂತೆ ಯಾರೂ ನಿಮಗೆ ಸಲಹೆ ನೀಡಲಾರರು. ಇಷ್ಟೇ ಏಕೆ ನಾಗರಿಕ ಸೇವೆಗೆ ನಿಮ್ಮ ಆಯ್ಕೆಯನ್ನು ಖಾತ್ರಿಪಡಿಸುವ ಯಾವ ಜಾಹೀರಾತುಗಳೂ ಇರಲಾರವು. ಇಷ್ಟಾಗಿಯೂ ದೇಶಾದ್ಯಂತ ಎಂಬಿಬಿಎಸ್ ಸೀಟುಗಳ ಬಗೆಗಿನ ಜಾಹೀರಾತುಗಳು ಮಾಧ್ಯಮದಲ್ಲಿ ರಾರಾಜಿಸುತ್ತವೆ!

ಪ್ರತಿಭೆ ಆಧಾರದಲ್ಲಿ ಸೀಟು ಹಂಚಿಕೆಯಾಗುವಾಗ ಯಾರಾದರೂ ನೇರ ಪ್ರವೇಶದ ಜಾಹೀರಾತು ನೀಡಲು ಹೇಗೆ ಸಾಧ್ಯ?

ಇಂಥ ಬಣ್ಣದ ಭರವಸೆಗಳ ಹಿಂದೆ ಕುರುಡು ಕಾಂಚಾಣದ ದೊಡ್ಡ ಜಾಲವೇ ಇದೆ. ಕಾಳಸಂತೆಯಲ್ಲಿ ಎಂಬಿಬಿಎಸ್ ಹಾಗೂ ಎಂಡಿ ಸೀಟುಗಳು ಬಿಕರಿಯಾಗುತ್ತವೆ. ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ದಲ್ಲಾಳಿಗಳ ಕೂಡಿಕೆಯಿಂದ ವರ್ಷಕ್ಕೆ ಸುಮಾರು 30 ಸಾವಿರ ಎಂಬಿಬಿಎಸ್ ಸೀಟುಗಳು ಹಾಗೂ 9600 ಸ್ನಾತಕೋತ್ತರ ವೈದ್ಯ ಸೀಟುಗಳು ಮಾರಾಟವಾಗುತ್ತವೆ. ಇದರ ಮಾರುಕಟ್ಟೆ ದರವನ್ನು ಲೆಕ್ಕ ಹಾಕಿದರೆ ವಾರ್ಷಿಕ ಸುಮಾರು 12 ಸಾವಿರ ಕೋಟಿ ರೂಪಾಯಿ ಕಾಳಧನ ಇಲ್ಲಿ ಕೈಬದಲಾವಣೆಯಾಗುತ್ತದೆ.

ದೇಶಾದ್ಯಂತ ಇರುವ 422 ವೈದ್ಯಕೀಯ ಕಾಲೇಜುಗಳ ಪೈಕಿ 224 ಖಾಸಗಿ ಕಾಲೇಜುಗಳು. ಒಟ್ಟು ಸೀಟುಗಳ ಶೇಕಡ 53ರಷ್ಟು ಸೀಟುಗಳು ಈ ಕಾಲೇಜುಗಳಲ್ಲಿವೆ. ಈ ಬಹುತೇಕ ಕಾಲೇಜುಗಳಲ್ಲಿ ಸಮರ್ಪಕ ಸೌಲಭ್ಯಗಳಿಲ್ಲ; ರೋಗಿಗಳಂತೂ ಇಲ್ಲವೇ ಇಲ್ಲ. ಆದರೆ ನಕಲಿ ಬೋಧಕರು ಮಾತ್ರ ಇದ್ದಾರೆ. ಬೆಂಗಳೂರಿನಲ್ಲಿ ಒಂದು ಎಂಬಿಬಿಎಸ್ ಸೀಟಿಗೆ ಒಂದು ಕೋಟಿಯಿಂದ ಹಿಡಿದು, ಉತ್ತರ ಪ್ರದೇಶದಲ್ಲಿ 25-35 ಲಕ್ಷಕ್ಕೆ ಬಿಕರಿಯಾಗುತ್ತವೆ.

ರೇಡಿಯಾಲಜಿ ಎಂಡಿ ಅಥವಾ ಚರ್ಮರೋಗದ ಎಂಡಿ ಸೀಟುಗಳು ಮೂರು ಕೋಟಿಗೆ ಮಾರಾಟವಾಗುತ್ತವೆ.

ಈ ದರ ನೀವು ಯಾವಾಗ ಸೀಟು ಕಾಯ್ದಿರಿಸುತ್ತೀರಿ ಎನ್ನುವುದಕ್ಕೆ ಅನುಗುಣವಾಗಿ ಬದಲಾಗುತ್ತವೆ. ತೀರಾ ಮುಂಚಿತವಾಗಿಯೇ ಕಾಯ್ದಿರಿಸಿದರೆ, ರಿಯಾಯ್ತಿಯೂ ಸಿಗುತ್ತದೆ. ಅದಾಗ್ಯೂ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾದ ಬಳಿಕ, ವೈದ್ಯಕೀಯ ಸೀಟುಗಳು ಮುಂಗಡ ಬುಕ್ಕಿಂಗ್ ವೇಳೆ ಇದ್ದ ದರದ ದುಪ್ಪಟ್ಟು ದುಬಾರಿಯಾಗುತ್ತವೆ. ಎಂಬಿಬಿಎಸ್ ಸೀಟುಗಳ ಮಾರಾಟದಿಂದಲೇ 9 ಸಾವಿರ ಕೋಟಿ ವಹಿವಾಟು ನಡೆಯುತ್ತದೆ.

 ಬಹುತೇಕ ಇಂಥ ಖಾಸಗಿ ಕಾಲೇಜು ಅಥವಾ ಸ್ವಾಯತ್ತ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಪ್ರತಿಭೆಗೆ ಅನುಗುಣವಾಗಿಯೇ ತೆಗೆದುಕೊಳ್ಳಲು ತಮ್ಮದೇ ಸಿಇಟಿಗಳನ್ನು ನಡೆಸಿದರೂ, ಪ್ರವೇಶಕ್ಕೆ ಮಾನದಂಡ ಅವರು ನೀಡುವ ಹಣವೇ ಆಗಿರುತ್ತದೆ.

ಕಾನೂನುಬದ್ಧವಾಗಿ ಶೇಕಡ 15ರಷ್ಟು ಅನಿವಾಸಿ ಕೋಟಾವನ್ನು ಬಹುತೇಕ ಎಲ್ಲ ರಾಜ್ಯಗಳಲ್ಲಿ ಕಾಲೇಜುಗಳಿಗೆ ನೀಡಲಾಗಿದ್ದರೂ ವಾಸ್ತವವಾಗಿ ಆಡಳಿತ ಮಂಡಳಿ ಕೊಟಾವೂ ಸೇರಿ ಶೇಕಡ 50ರಷ್ಟು ಸೀಟುಗಳನ್ನು ಕಾಲೇಜುಗಳು ಮಾರಾಟ ಮಾಡುತ್ತವೆ. ಕೆಲವು ರಾಜ್ಯಗಳಲ್ಲಂತೂ ಶೇಕಡ 80 ಹಾಗೂ 100ರವರೆಗೂ ಮಾರಾಟವಾಗುವ ನಿದರ್ಶನಗಳೂ ಇವೆ.

ಸ್ನಾತಕೋತ್ತರ ವೈದ್ಯಪದವಿಗೆ 23600 ಸೀಟುಗಳಿದ್ದು, ಇದಕ್ಕೆ ಭಾರಿ ಬೇಡಿಕೆ ಇರುತ್ತದೆ. ಆದ್ದರಿಂದ ಖಾಸಗಿ ಕಾಲೇಜುಗಳಲ್ಲಿರುವ 1300 ಡಿಪ್ಲೋಮಾ ಸೀಟುಗಳೂ ಸೇರಿದಂತೆ 9400 ಸೀಟುಗಳು ಬಿಕರಿಯಾಗುತ್ತವೆ. ಅಂದಾಜಿನ ಪ್ರಕಾರ ಕನಿಷ್ಠ ಎಂದರೆ ಶೇಕಡ 40ರಷ್ಟು ಸೀಟುಗಳು ಮಾರಾಟವಾಗುತ್ತಿದ್ದು, ಇದರಲ್ಲಿ 2900 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಸೂಪರ್ ಸ್ಪೆಷಾಲಿಟಿ ಸೀಟುಗಳು 370 ಲಭ್ಯವಿದ್ದು, ಮಾರುಕಟ್ಟೆ ದರದ ಅನ್ವಯ ಕನಿಷ್ಠ 3000 ಕೋಟಿ ರೂಪಾಯಿ ವ್ಯವಹಾರ ಇದರಲ್ಲಿ ಕುದುರುತ್ತದೆ. ಇದರಲ್ಲಿ ಬಹುತೇಕ ಮೊತ್ತವನ್ನು ನಗದಿನಲ್ಲಿ ನೀಡುವುದರಿಂದ ಹಣ ವರ್ಗಾವಣೆಗೆ ಯಾವ ದಾಖಲೆಯೂ ಸಿಗುವುದಿಲ್ಲ. ಇದಕ್ಕೆ ಬಹಿರಂಗವಾಗಿ ಜಾಹೀರಾತುಗಳನ್ನು ನೀಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News