ಹೊಸದಿಲ್ಲಿ;ಎರಡು ವರ್ಷಗಳಲ್ಲಿ ಶೇ.50ರಷ್ಟು ರೈತರು ಬೆಳೆ ವಿಮೆ ಯೋಜನೆಗೆ ಸೇರಬೇಕು:ಪ್ರಧಾನಿ

Update: 2016-01-31 14:44 GMT

ಹೊಸದಿಲ್ಲಿ,ಜ.31: ಇತ್ತೀಚಿಗಷ್ಟೇ ಪ್ರಕಟಿಸಲಾಗಿರುವ ಬೆಳೆ ವಿಮೆ ಯೋಜನೆಯ ಲಾಭಗಳನ್ನು ರವಿವಾರ ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘‘ಮನ್ ಕಿ ಬಾತ್’’ನಲ್ಲಿ ಪ್ರಮುಖವಾಗಿ ಬಿಂಬಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಶೇ.50ರಷ್ಟು ಕೃಷಿಕರು ಯೋಜನೆಗೆ ಸೇರ್ಪಡೆಗೊಳ್ಳುವಂತಾಗಲು ರಾಷ್ಟ್ರಾದ್ಯಂತ ಅದರ ಕುರಿತು ಅರಿವನ್ನು ಮೂಡಿಸಬೇಕು ಎಂದು ಹೇಳಿದರು.
ಖಾದಿಯನ್ನು ಜನಪ್ರಿಯಗೊಳಿಸಲು ನಿರಂತರ ಪ್ರಯತ್ನ ಮತ್ತು ಹೆಣ್ಣುಮಕ್ಕಳ ರಕ್ಷಣೆಗಾಗಿ ಜಾಗೃತಿಗೆ ಒತ್ತು ನೀಡಿದ ಅವರು ಮಹತ್ವಾಕಾಂಕ್ಷೆಯ ‘‘ಸ್ಟಾರ್ಟ್-ಅಪ್ ಇಂಡಿಯಾ’’ಕಾರ್ಯಕ್ರಮವನ್ನೂ ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ಅರಿವನ್ನು ಹರಡುವಲ್ಲಿ ಜನತೆಯಿಂದ ‘‘ಗರಿಷ್ಠ ನೆರವು’’ತನಗೆ ಅಗತ್ಯವಿದೆ ಎಂದು ಹೇಳಿದರು.


ನಮ್ಮ ದೇಶದಲ್ಲಿ ಕೃಷಿಕರ ಕುರಿತು ಬಹಳಷ್ಟು ಮಾತುಗಳನ್ನಾಡಲಾಗುತ್ತದೆ. ಈ ಚರ್ಚೆಯಲ್ಲಿ ಭಾಗಿಯಾಗಲು ನಾನು ಬಯಸುವುದಿಲ್ಲ. ಆದರೆ ಕೃಷಿಕರು ಭಾರೀ ಬಿಕ್ಕಟ್ಟನ್ನೆದುರಿಸುತ್ತಿದ್ದಾರೆ. ಪ್ರಕೃತಿ ವಿಕೋಪವುಂಟಾದಾಗ ಅವರ ಇಡೀ ಪ್ರಯತ್ನವು ವ್ಯರ್ಥವಾಗುತ್ತದೆ. ಬೆಳೆ ವಿಮೆಯೊಂದೇ ಅವರಿಗೆ ಭದ್ರತೆಯನ್ನೊದಗಿಸಬಲ್ಲುದು ಎಂದು ಮೋದಿ ನುಡಿದರು.
ಈ ಎಲ್ಲ ವರ್ಷಗಳಲ್ಲಿ ಬೆಳೆ ವಿಮೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದವಾದರೂ ಶೇ.20-25ಕ್ಕೂ ಕಡಿಮೆ ಕೃಷಿಕರಿಗೆ ಮಾತ್ರ ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು. ಇನ್ನೆರಡು ವರ್ಷಗಳಲ್ಲಿ ಕನಿಷ್ಠ ಶೇ.50ರಷ್ಟು ರೈತರನ್ನಾದರೂ ನಾವು ಈ ಯೋಜನೆಗೆ ಸದಸ್ಯರನ್ನಾಗಿಸಬೇಕಾಗಿದೆ ಮತ್ತು ಇದಕ್ಕಾಗಿ ನನಗೆ ಜನತೆಯ ನೆರವಿನ ಅಗತ್ಯವಿದೆ ಎಂದರು.


  ತಂತ್ರಜ್ಞಾನ ಬಳಕೆಯು ಪರಿಹಾರದ ತ್ವರಿತ ನಿರ್ಧಾರ ಮತ್ತು ವಿತರಣೆಯನ್ನು ಖಚಿತ ಪಡಿಸಲಿದೆ ಎಂದ ಅವರು,ಯಾರೂ ಊಹಿಸಲೂ ಸಾಧ್ಯವಿಲ್ಲದಷ್ಟು ಕಡಿಮೆ ಪ್ರೀಮಿಯಂ ನಿಗದಿಗೊಳಿಸಿರುವುದು ಈ ಯೋಜನೆಯ ಅತ್ಯಂತ ಪ್ರಮುಖ ಅಂಶವಾಗಿದೆ. ಮುಂಗಾರು ಬೆಳೆಗೆ ಕೇವಲ ಶೇ.2 ಮತ್ತು ಹಿಂಗಾರು ಬೆಳೆಗೆ ಶೇ.1.5 ಪ್ರೀಮಿಯಂ ದರವನ್ನಿರಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News