ಪಿಡಿಪಿ ನಾಯಕರೊಂದಿಗೆ ಮೆಹಬೂಬ ಮಾತುಕತೆ
ಶ್ರೀನಗರ,ಜ.31: ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ ರವಿವಾರ ತನ್ನ ಪಕ್ಷದ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದರಾದರೂ, ಜಮ್ಮುಕಾಶ್ಮೀರದಲ್ಲಿ ಸರಕಾರ ರಚನೆ ಕುರಿತ ಅನಿಶ್ಚಿತತೆ ಇನ್ನೂ ಮುಂದುವರಿದಿದೆ. ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ಬಗ್ಗೆ ಚರ್ಚಿಸುವ ಉದ್ದೇಶದಿಂದ ಸಭೆಯನ್ನು ನಡೆಸಲಾಯಿತೆಂದು ಪಕ್ಷದ ಮೂಲಗಳು ತಿಳಿಸಿವೆ. ಇಂದಿನ ಸಭೆಯಲ್ಲಿ ಸರಕಾರ ರಚನೆಯ ಸಾಧ್ಯತೆಯ ಬಗೆಗೂ ಚರ್ಚಿಸಲಾಯಿತೆಂದು ಅವು ಹೇಳಿವೆ.ಜನವರಿ 7ರಂದು ತನ್ನ ತಂದೆ ಮುಫ್ತಿ ಮುಹಮ್ಮದ್ ಸಯೀದ್ ನಿಧನದ ಬಳಿಕ, ಮೆಹಬೂಬ ಅವರು ಮುಖ್ಯಮಂತ್ರಿಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿತ್ತು. ಇಂದಿನ ಸಭೆಯ ಬಳಿಕ ಪಿಡಿಪಿ ನಾಯಕ ನಯೀಮ್ ಅಖ್ತರ್ ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಜೊತೆ ಮಾತನಾಡುತ್ತಾ, ‘‘ ಬಿಜೆಪಿ ಜೊತೆ ಮೈತ್ರಿಯೇರ್ಪಡಿಸುವ ನಿರ್ಧಾರವು ಜನಪ್ರಿಯವಾದುದಲ್ಲ. ಆದರೂ ಮೈತ್ರಿಕೂಟದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಉದ್ದೇಶದಿಂದ ಅದಕ್ಕೆ ಬದ್ಧರಾಗಿದ್ದೇವೆ. ಎರಡೂ ಪಕ್ಷಗಳ ನಡುವೆ ನಂಬಿಕೆಯ ಕೊರತೆಯಿದ್ದು, ಅದನ್ನು ಬಗೆಹರಿಸಬೇಕಾಗಿದೆ ’’ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆ ಸೇರಿ ಸರಕಾರ ರಚಿಸುವ ಬಗ್ಗೆ ಪಿಡಿಪಿಯಲ್ಲಿ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೂ, ಪಕ್ಷದ ಕಾರ್ಯಕರ್ತರ ಒಂದು ವರ್ಗವು, ಸರಕಾರ ರಚನೆಯನ್ನು ಬಲವಾಗಿ ಬೆಂಬಲಿಸುತ್ತಿದೆ. ಕಾಶ್ಮೀರಕ್ಕೆ ಅರ್ಥಿಕ ಪ್ಯಾಕೇಜ್ ಹಾಗೂ ನೆರೆಪರಿಹಾರ ಬಿಡುಗಡೆಯಲ್ಲಿ ಕೇಂದ್ರ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಮೆಹಬೂಬ ಅವರು ಬಿಜೆಪಿ ಜೊತೆ ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.