ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಯಾರಿಂದ ಗೊತ್ತೇ ?
ಹೊಸದಿಲ್ಲಿ , ಫೆ. ೧ : ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಹಲವಾರು ಹಾಲಿನ ಡಬ್ಬಗಳು, ಕಾಫಿ ಪುಡಿ ಡಬ್ಬಗಳು, ವಿಮಾನದೊಳಗೆ ನೀಡುವ ಆಹಾರದ ಪೊಟ್ಟಣಗಳು, ಒಣ ಹಣ್ಣುಗಳು, ವಿಸ್ಕಿ ಬಾಟಲಿಗಳು ಹಾಗು ಇನ್ನೂ ಹಲವು ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಆದರೆ ವಿಶೇಷವೇನೆಂದರೆ, ಇದನ್ನು ಅಕ್ರಮವಾಗಿ ಸಾಗಿಸುತ್ತಿದ ಯಾವುದೇ ಪ್ರಯಾಣಿಕನಿಂದ ವಶಪಡಿಸಿಕೊಂಡಿಲ್ಲ. ಇದು ಅವರಿಗೆ ಸಿಕ್ಕಿದ್ದು ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿಯಿಂದ !
ಈ ಸಿಬ್ಬಂದಿ ತಾನು ಕೆಲಸ ಮಾಡುವ ವಿಮಾನದೊಳಗೆಯೇ ಕಳ್ಳತನ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ರೆಡ್ ಹ್ಯಾಂಡ್ ಆಗಿ ಹಿಡಿಯಲು ಅವರು ಕಾಯುತ್ತಿದ್ದರು. ಕೊನೆಗೂ " ಮನೆಯೊಳಗಿನ ಕಳ್ಳಿ " ಸಿಕ್ಕಿ ಬಿದ್ದಳು.
ಏರ್ ಇಂಡಿಯಾದ ನೂತನ ಅಧ್ಯಕ್ಷ ಅಶ್ವನಿ ಲೋಹಾನಿ ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರೂ ಒಳಗೆ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ. ಜನವರಿ ೨೭ ಕ್ಕೆ ಕೊಲಂಬೊದಿಂದ ಬರುವ ಅಂತಾರಾಷ್ಟ್ರೀಯ ವಿಮಾನದ ಕ್ಯಾಬಿನ್ ಸಿಬ್ಬಂದಿ ಮಹಿಳೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಆಕೆ ಬಂಡ ಕೂಡಲೇ ಆಕೆಯ ಬ್ಯಾಗ್ ಪರೀಕ್ಷಿಸಿದ ಅಧಿಕಾರಿಗಳು ಅವಕ್ಕಾದರು.
"ವಿಮಾನದೊಳಗೆ ಸಿಗುವ ಪ್ರತಿಯೊಂದು ವಸ್ತುವನ್ನೂ ಆಕೆ ಎತ್ತಿಕೊಂಡಿದ್ದಳು " ಎಂದು ಬ್ಯಾಗ್ ನೋಡಿದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಕೆಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ್ದು ಆಕೆಯ ವಿರುದ್ಧ ತನಿಖೆ ಪ್ರಾರಂಭಿಸಲಾಗಿದೆ ಎಂದು ಏರ್ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.