ಯುಪಿಎಯನ್ನು ಹೊಗಳಿದ ಮೋದಿ!

Update: 2016-02-01 18:16 GMT

ನರೇಗಾ ದಶಮಾನೋತ್ಸವ

ಹೊಸದಿಲ್ಲಿ, ಫೆ.1: ದೇಶದಲ್ಲಿ ಮಹತ್ವಾಕಾಂಕ್ಷಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಂದು ಮಂಗಳವಾರಕ್ಕೆ ಹತ್ತು ವರ್ಷ ತುಂಬುತ್ತಿದ್ದು, ಯುಪಿಎ ಸರಕಾರದ ಯೋಜನೆಯನ್ನು ಹಿಂದೆ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಈ ಯೋಜನೆಯ ದಶಕದ ಸಾಧನೆ ದೇಶದ ಹೆಮ್ಮೆ ಹಾಗೂ ಎಲ್ಲರೂ ಸಂಭ್ರಮಿಸುವಂಥದ್ದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗಿದ್ದು, ಮುಂದಿನ ವರ್ಷಗಳಲ್ಲಿ ಇದರ ವಿಧಿವಿಧಾನಗಳನ್ನು ಮತ್ತಷ್ಟು ಸರಳಗೊಳಿಸಲು ಹಾಗೂ ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಬಡವರಿಗೆ ಸುಸ್ಥಿರ ಆಸ್ತಿಗಳನ್ನು ನಿರ್ಮಿಸಲು ಯೋಜನೆಯನ್ನು ಸಾಧನವಾಗಿ ಬಳಸಲಾಗುತ್ತದೆ ಎಂದು ಪ್ರಧಾನಿ ಕಚೇರಿ ಪ್ರಕಟನೆ ಹೇಳಿದೆ.

ನಾಳೆ ಆಯೋಜಿಸಿರುವ ನರೇಗಾ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಲಿರುವ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಹೊಸ ಘೋಷಣೆಯನ್ನು ಮಾಡುವ ನಿರೀಕ್ಷೆ ಇದೆ.

ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಮಾನವದಿನಗಳನ್ನು ಎರಡನೆ ತ್ರೈಮಾಸಿಕ (45.88 ಕೋಟಿ) ಹಾಗೂ ಮೂರನೆ ತ್ರೈಮಾಸಿಕ (46.1 ಕೋಟಿ) ಸೃಷ್ಟಿಸಲಾಗಿದೆ. ಯೋಜನೆಯನ್ನು ಬಡವರ ಆಸ್ತಿ ಸೃಷ್ಟಿಸುವ ಸಾಧನವಾಗಿ ವಿಷ್ಯದಲ್ಲಿ ಬಳಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಕಟನೆ ಹೇಳಿದೆ.

2006ರಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯೋಜನೆಯನ್ನು ಘೋಷಿಸಿದ್ದರು. ಇದರ ದಶಮಾನೋತ್ಸವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಯೋಜನೆ ಆರಂಭವಾದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಂದ್ಲಪಲ್ಲಿ ಗ್ರಾಮಕ್ಕೆ ನಾಳೆ ಭೇಟಿ ನೀಡಲಿದ್ದಾರೆ. ಈ ಯೋಜನೆಯನ್ನು ಯುಪಿಎ ಸರಕಾರ, ದೇಶದ ಬಡತನ ತೊಗಲಿಸುವಲ್ಲಿ ಐತಿಹಾಸಿಕ ಕ್ರಮ ಎಂದು ಬಣ್ಣಿಸಿತ್ತು.

ಮೋದಿ ನೇತೃತ್ವದ ಎನ್‌ಡಿಎ ಸರಕಾರ ಇತ್ತೀಚಿನವರೆಗೂ ಯೋಜನೆಯನ್ನು ವಿರೋಧಿಸುತ್ತಾ ಬಂದಿದ್ದು, ಅರುವತ್ತು ವರ್ಷಗಳಲ್ಲಿ ಬಡತನ ನಿರ್ಮೂಲನೆ ಮಾಡಲಾಗದ ಕಾಂಗ್ರೆಸ್‌ನ್ನು ವೈಫಲ್ಯದ ಸ್ಮಾರಕ ಎಂದು ಮೋದಿ ಲೇವಡಿ ಮಾಡಿದ್ದರು. ಈ ಯೋಜನೆ ಆರಂಭವಾದಾಗಿನಿಂದ ಇದುವರೆಗೆ 3,13,844.55 ಕೋಟಿ ರೂ.ಗಳ ಪೈಕಿ ಶೇ.71ನ್ನು ಗ್ರಾಮೀಣ ಬಡವರ ವೇತನಕ್ಕಾಗಿ ಪಾವತಿಸಲಾಗಿದೆ. ಇವರಲ್ಲಿ ಶೇ.20ರಷ್ಟು ಪರಿಶಿಷ್ಟ ಜಾತಿಯವರು ಹಾಗೂ ಶೇ.17ರಷ್ಟು ಪರಿಶಿಷ್ಟ ಪಂಗಡದವರು ಸೇರಿದ್ದಾರೆ. ಒಟ್ಟು 1,980 ಕೋಟಿ ಮಾನವದಿನಗಳನ್ನು ಸೃಷ್ಟಿಸಲಾಗಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ಕೂಡಾ ಶಾಸನಬದ್ಧ ಶೇ.33ರ ಮಿತಿಯನ್ನು ಮೀರಿ ಬೆಳೆದಿದೆ.

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಗ್ರಾಮಪಂಚಾಯತ್‌ಗಳ ಸಮಗ್ರ ಅಭಿವೃದ್ಧಿ ಯೋಜನೆಗಳು ಇದರಲ್ಲಿ ಆಗಿವೆ. ಶೇ.65ಕ್ಕೂ ಹೆಚ್ಚು ಕಾಮಗಾರಿಗಳು ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಸಂಬಂಧಿಸಿದವು ಎಂದು ಪ್ರಕಟನೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News