ಕುಡಿದ ಚಾಲಕ ಆತ್ಮಹತ್ಯಾ ಬಾಂಬರ್ ಇದ್ದಂತೆ:ನ್ಯಾಯಾಲಯ
ಹೊಸದಿಲ್ಲಿ,ಫೆ.3: ಪಾನಮತ್ತ ಚಾಲಕ ‘‘ಸಜೀವ ಆತ್ಮಹತ್ಯಾ ಮಾನ ಬಾಂಬ್’’ಇದ್ದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ವ್ಯಕ್ತಿಯೋರ್ವನಿಗೆ ಕೆಳ ನ್ಯಾಯಾಲಯವು ವಿಧಿಸಿರುವ ಆರು ದಿನಗಳ ಜೈಲುಶಿಕ್ಷೆಯನ್ನು ಎತ್ತಿ ಹಿಡಿದಿದೆ.
ವಿಚಾರಣಾ ನ್ಯಾಯಾಲಯವು ತನಗೆ ವಿಧಿಸಿರುವ ಆರು ದಿನಗಳ ಜೈಲುಶಿಕ್ಷೆ ಮತ್ತು 2,000 ರೂ.ದಂಡವನ್ನು ಪ್ರಶ್ನಿಸಿ ಬದರಪುರ ನಿವಾಸಿ ಜೋಗಿ ವರ್ಗೀಸ್ ಎಂಬಾತ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾ.ಲೋಕೇಶ ಕುಮಾರ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವರ್ಗೀಸ್ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದಾಗ ಆತನ ರಕ್ತದಲ್ಲಿ ಅನುಮತಿಸಲ್ಪಟ್ಟ ಪ್ರಮಾಣಕ್ಕಿಂತಲೂ 42 ಪಟ್ಟು ಅಧಿಕ ಮದ್ಯದ ಅಂಶ ಪತ್ತೆಯಾಗಿದ್ದು ವಿಚಾರಣಾ ನ್ಯಾಯಾಲಯವು ಆತನಿಗೆ ವಿಧಿಸಿರುವ ಶಿಕ್ಷೆ ಸರಿಯಾಗಿಯೇ ಇದೆ. ಈ ವ್ಯಕ್ತಿ ನ್ಯಾಯಾಲಯದಿಂದ ಯಾವುದೇ ಅನುಕಂಪಕ್ಕೆ ಅನರ್ಹನಾಗಿದ್ದಾನೆ ಎಂದು ನ್ಯಾಯಾಲಯವು ಹೇಳಿತು.
ಅರ್ಜಿದಾರನು ಇಷ್ಟು ಪಾನಮತ್ತನಾಗಿ ವಾಹನವನ್ನು ಚಲಾಯಿಸುತ್ತಿದ್ದಾಗ ಆತ ಸಜೀವ ಆತ್ಮಹತ್ಯಾ ಮಾನವ ಬಾಂಬ್‌ನಂತೆ ಇದ್ದ ಎನ್ನುವುದು ನಮ್ಮ ಅಭಿಪ್ರಾಯ. ಇಂತಹ ಸ್ಥಿತಿಯಲ್ಲಿ ಚಾಲನೆ ಮಾಡುವಾಗ ಆತ ಅತ್ಯಂತ ಸಣ್ಣ ತಪ್ಪು ಮಾಡಿದರೂ ಅದು ಇತರರ ಮತ್ತು ಸ್ವತಃ ಆತನ ಜೀವಕ್ಕೇ ಮಾರಕವಾಗಿರುತ್ತಿತ್ತು ಎಂದ ನ್ಯಾಯಾಲಯವು, ವರ್ಗೀಸ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಮತ್ತು ಶಿಕ್ಷೆಯನ್ನು ಅನುಭವಿಸಲು ಜೈಲಿಗೆ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿತು.
ಪಾನಮತ್ತ ಚಾಲನೆಗಾಗಿ ವಿಚಾರಣಾ ನ್ಯಾಯಾಲಯವು ವರ್ಗೀಸ್‌ನನ್ನು ಕಳೆದ ವರ್ಷದ ಡಿ.21ರಂದು ದೋಷಿಯೆಂದು ಘೋಷಿಸಿತ್ತಲ್ಲದೆ,ಆರು ತಿಂಗಳ ಅವಧಿಗೆ ಆತನ ವಾಹನ ಚಾಲನೆ ಪರವಾನಿಗೆಯನ್ನು ರದ್ದುಗೊಳಿಸಿ ಹೊಸದಾಗಿ ಚಾಲನಾ ಪರೀಕ್ಷೆಗೆ ಹಾಜರಾಗುವಂತೆ ಆದೇಶಿಸಿತ್ತು.