ಸೋನಿಯಾರನ್ನು ಸಿಲುಕಿಸಲು ಸಂಚು ವಿವರ ಬಹಿರಂಗಕ್ಕೆ ಮೋದಿಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ, ಫೆ.3: ಇಟಾಲಿಯನ್ ನಾವಿಕರನ್ನು ಬಿಡುಗಡೆ ಮಾಡಬೇಕಾದರೆ, ಹೆಲಿಕಾಪ್ಟರ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿ ಸೋನಿಯಾ ವಿರುದ್ಧ ಮಾಹಿತಿ ನೀಡಬೇಕು ಎಂಬ ಕೊಡುಗೆಯನ್ನು ಕೇಂದ್ರ ಸರಕಾರ ಮುಂದಿಟ್ಟಿತ್ತೆಂಬ ವರದಿಗಳ ಕುರಿತಂತೆ ಕಾಂಗ್ರೆಸ್ ಸರಕಾರ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದೆ. ಕ್ರಿಸ್ಟಿಯನ್ ಮೈಕಲ್ ಎಂದು ಗುರುತಿಸಲಾಗಿರುವ ಏಜೆಂಟ್, ಕಳೆದ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಇಟಲಿಯ ಪ್ರಧಾನಿ ಮಟ್ಟೆಯೊ ರೆಂಝಿಯವರನ್ನು ಭೇಟಿ ಮಾಡಿದ್ದ ವೇಳೆ ಮೋದಿ ಈ ಕೊಡುಗೆಯನ್ನು ಮುಂದಿಟ್ಟಿದ್ದರೆಂದು ಆರೋಪಿಸಿದ್ದಾನೆ.
ಈ ವಿಷಯವನ್ನು ನಂಬುವುದಾದಲ್ಲಿ ಹಾಗೂ ವರದಿ ಹೊರ ಬಂದು 48 ತಾಸುಗಳ ಬಳಿಕವೂ ಪ್ರಧಾನಿ ಕಚೇರಿ ಅದನ್ನು ಅಲ್ಲಗಳೆಯದ ಕಾರಣ, ದೇಶದ ಬೊಕ್ಕಸದ ಖರ್ಚಿನಲ್ಲಿ ಮೋದಿ ಮಾಡುತ್ತಿರುವ ವಿದೇಶ ಪ್ರವಾಸಗಳು ಎಂತಹವು ಎಂಬುದು ತಮಗೆ ತಿಳಿಯುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಬುಧವಾರ ಹೇಳಿದ್ದಾರೆ.
ಈ ಆರೋಪದ ಕುರಿತು ಪ್ರಧಾನಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಆಗ್ರಹಿಸಿದ್ದಾರೆ. ‘ಮಾನ್ಯ ಪ್ರಧಾನಿಯವರೇ, ಇದು ಸತ್ಯವೇ?’’ ಎಂದವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಪ್ರಧಾನಿ ಕಚೇರಿ ಆರೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು, ಇದು ಪ್ರತಿಕ್ರಿಯಿಸಲು ಅಯೋಗ್ಯವಾದ ಹಾಸ್ಯಾಸ್ಪದ ಆರೋಪವೆಂದು ತಳ್ಳಿ ಹಾಕಿದ್ದಾರೆ.
ಇದು, ಮುಂದಿನ ಬಜೆಟ್ ಅಧಿವೇಶನದಲ್ಲಿ ಕೋಲಾಹಲವೆಬ್ಬಿಸಲು ವಿಪಕ್ಷೀಯರಿಗೊಂದು ಅಸ್ತ್ರವನ್ನು ನೀಡಿದೆ.
ಬ್ರಿಟನ್ ಮೂಲದ ಕಂಪೆನಿಯು, ಮಧ್ಯವರ್ತಿಗಳಿಗೆ 375 ಕೋಟಿ ರೂ. ಹೆಚ್ಚು ಲಂಚ ನೀಡಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ 12 ವಿವಿಐಪಿ ಹೆಲಿಕಾಪ್ಟರ್ ಖರೀದಿಸಲು ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗೆ ಮಾಡಿಕೊಳ್ಳಲಾಗಿದ್ದ 3,727 ಕೋಟಿ ರೂ. ಗುತ್ತಿಗೆಯನ್ನು 2014ರ ಜನವರಿಯಲ್ಲಿ ರದ್ದುಗೊಳಿಸಲಾಗಿತ್ತು.