ಭುಜ್‌ನಲ್ಲಿ ಶಾರೂಕ್ ಚಿತ್ರದ ಶೂಟಿಂಗ್ ವಿರೋಧಿಸಿ ವಿಹಿಂಪ ಪ್ರತಿಭಟನೆ
ಭುಜ್(ಗುಜರಾತ್),ಫೆ.3: ‘‘ಅಸಹಿಷ್ಣುತೆ’’ ಕುರಿತು ಬಾಲಿವುಡ್ ನಟ ಶಾರೂಕ್ ಖಾನ್ ಅವರ ಹೇಳಿಕೆಗಾಗಿ ವಿಶ್ವ ಹಿಂದೂ ಪರಿಷತ್‌ನ ಸದಸ್ಯರು ಜಿಲ್ಲೆಯಲ್ಲಿ ನಡೆಯುತ್ತಿರುವ ಅವರ ‘‘ರಯೀಸ್’’ಚಿತ್ರದ ಶೂಟಿಂಗ್‌ನ್ನು ವಿರೋಧಿಸಿ ಬುಧವಾರ ಇಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆಯನ್ನು ನಡೆಸಿದರು. ಶಾರೂಕ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಅವರ ಪ್ರತಿಕೃತಿಯನ್ನು ದಹಿಸಿದರು. ಅವರ ಪೋಸ್ಟರ್‌ಗಳನ್ನೂ ಹರಿದು ಹಾಕಿದರು.
ಸುಮಾರು 25-30 ವಿಹಿಂಪ ಕಾರ್ಯಕರ್ತರು ಮಂಗಳವಾರ ಚಿತ್ರದ ಶೂಟಿಂಗ್‌ಗೆ ನೀಡಿರುವ ಅನುಮತಿಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಅಹವಾಲು ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಸಿದ ಬಳಿಕ ಅವರು ಭುಜ್ ನಗರದ ಹೊರವಲಯದಲ್ಲಿರುವ ಚಿತ್ರೀಕರಣದ ತಾಣಕ್ಕೆ ತೆರಳಲು ಮುಂದಾಗಿದ್ದರು. ಆದರೆ ನಾವು ಅವರನ್ನು ತಡೆದು ಚದುರಿಸಿದೆವು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ತನಗೆ ಹೆಸರು, ಜನ ಪ್ರಿಯತೆ ಮತ್ತು ಶ್ರೀಮಂತಿಕೆಯನ್ನು ನೀಡಿರುವ ಈ ದೇಶದಲ್ಲಿ ವಾಸಿಸುತ್ತಿರುವ ಅವರು ಯೋಚಿಸಬೇಕು. ಅವರು ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿದ್ದರೆ ವಿಹಿಂಪ ಅವರನ್ನೆಂದೂ ಕ್ಷಮಿಸದು. ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವ ಸುದ್ದಿ ಇಂದಿನ ಪತ್ರಿಕೆಗಳಲ್ಲಿವೆ. ಅವರೇಕೆ ಅಲ್ಲಿಯ ಅಸಹಿಷ್ಣುತೆ ಕುರಿತು ಹೇಳಿಕೆಯನ್ನು ನೀಡುತ್ತಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ವಿಹಿಂಪ ಪ್ರಧಾನ ಕಾರ್ಯದರ್ಶಿ ರಣಛೋಡ್ ಭರ್ವಾದ್ ಪ್ರಶ್ನಿಸಿದರು.