×
Ad

ಗುಜರಾತ್: ಅಕ್ರಮ ಗಣಿಗಾರಿಕೆ ಕುರಿತು ಮಾಹಿತಿ ಕೋರಿದ್ದ ಆರ್‌ಟಿಐ ಕಾರ್ಯಕರ್ತನಿಗೆ ಹಲ್ಲೆ

Update: 2016-02-03 23:51 IST

 ಅಹ್ಮದಾಬಾದ್,ಫೆ.3: ತಾಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಮಾಹಿತಿಯನ್ನು ಕೋರಿದ್ದಕ್ಕಾಗಿ ಮತ್ತು ಅದನ್ನು ವಿರೋಧಿಸುತ್ತಿರುವುದಕ್ಕಾಗಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಮಂಗಳವಾರ ತಾಪಿ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಆರ್‌ಟಿಐ ಕಾರ್ಯಕರ್ತ ರೊಮೆಲ್ ಸುತಾರಿಯಾ ಎನ್ನುವವರ ಮೇಲೆ ಗಂಭೀರ ಹಲ್ಲೆ ನಡೆಸಿದೆ.
ಸುತಾರಿಯಾ ರಾತ್ರಿಯೇ ಈ ಬಗ್ಗೆ ದೂರು ದಾಖಲಿಸಿದ್ದು, ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ.
ಅಕ್ರಮ ಗಣಿಗಾರಿಕೆ ಕುರಿತು ತಾನು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ವಿಚಾರಣೆಗಾಗಿ ಸುತಾರಿಯಾ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಅವರು ಪಡೆದುಕೊಂಡಿದ್ದ ದಾಖಲೆಗಳಿದ್ದ ಕಡತವನ್ನು ಕಿತ್ತುಕೊಂಡು ಪರಾರಿಯಾಗಿದೆ.
ಜಿಲ್ಲಾ ಗಣಿ ಮತ್ತು ಖನಿಜಗಳ ಇಲಾಖೆಯು ಪರವಾನಿಗೆ ನೀಡಿರುವ 62 ಮರಳು ಮತ್ತು ಕಲ್ಲು ಗಣಿಗಳ ಪೈಕಿ ಹೆಚ್ಚಿನವು ಸರಕಾರದ ಪರಿಸರ ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ ಎಂದು ಸುತಾರಿಯಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News