ರೈಲ್ವೆ ಯೋಜನೆಗಳಿಗಾಗಿ ರಾಜ್ಯಗಳೊಂದಿಗಿನ ಜಂಟಿ ಉದ್ಯಮಗಳಿಗೆ ಸಂಪುಟದ ಒಪ್ಪಿಗೆ
ಹೊಸದಿಲ್ಲಿ, ಫೆ.3: ರಾಜ್ಯಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ ಉದ್ದೇಶದಿಂದ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ರಾಜ್ಯ ಸರಕಾರಗಳೊಂದಿಗೆ ಜಂಟಿ ಉದ್ಯಮಗಳನ್ನು ಸ್ಥಾಪಿಸಲು ರೈಲ್ವೆ ಇಲಾಖೆಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆಯನ್ನು ನೀಡಿದೆ. ವಿವಿಧ ರಾಜ್ಯಗಳಲ್ಲಿ ರೈಲ್ವೆ ಮಾರ್ಗಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಭಾರೀ ಮೊತ್ತದ ಹಣಕಾಸಿನ ಅಗತ್ಯವನ್ನು ಪರಿಗಣಿಸಿ ಜಂಟಿ ಉದ್ಯಮಗಳು ಈಗ ಯೋಜನೆಗಳ ಗುರುತಿಸುವಿಕೆ,ಭೂ ಸ್ವಾಧೀನ ಮತ್ತು ಸರಕಾರದ ಆರ್ಥಿಕ ನೆರವಿನ ಜೊತೆಗೆ ಸಂಭಾವ್ಯ ಹೂಡಿಕೆಗಳು ಮತ್ತು ಉಸ್ತುವಾರಿ ಹೊಣೆಗಾರಿಕೆಗಳನ್ನು ಹೊಂದಿರಲಿವೆ.
ರೈಲ್ವೆ ಸಚಿವಾಲಯ ಮತ್ತು ಸಂಬಂಧಿತ ರಾಜ್ಯ ಸರಕಾರಗಳ ಸಮಾನ ಸಹಭಾಗಿತ್ವದಲ್ಲಿ ಜಂಟಿ ಪ್ರವರ್ತನೆಯ ಕಂಪೆನಿಗಳನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ನಿರ್ಧರಿಸಿತು.
ಪ್ರತೀ ಜಂಟಿ ಉದ್ಯಮವು ಅದು ಕೈಗೆತ್ತಿಕೊಳ್ಳುವ ಯೋಜನೆಗಳ ಗಾತ್ರವನ್ನು ಆಧರಿಸಿ 100 ಕೋಟಿ ರೂ.ಗಳ ಆರಂಭಿಕ ಪಾವತಿಯಾದ ಬಂಡವಾಳವನ್ನು ಹೊಂದಿರಲಿದೆ.