ಇಸ್ಲಾಂ ಮೇಲೆ ನಡೆಯುವ ದಾಳಿ ಎಲ್ಲ ಧರ್ಮಗಳ ಮೇಲೆ ನಡೆಯುವ ದಾಳಿ ; ಒಬಾಮ ಪ್ರತಿಪಾದನೆ

Update: 2016-02-04 14:01 GMT

ವಾಶಿಂಗ್ಟನ್, ಫೆ. 4: ಅಮೆರಿಕದ ಮಸೀದಿಯೊಂದಕ್ಕೆ ಅಧ್ಯಕ್ಷ ಬರಾಕ್ ಒಬಾಮ ಬುಧವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಸ್ಲಾಂ ಮೇಲೆ ನಡೆಯುವ ದಾಳಿಗಳು ಎಲ್ಲ ಧರ್ಮಗಳ ಮೇಲೆ ನಡೆಯುವ ದಾಳಿಗಳಾಗಿವೆ ಎಂದು ಘೋಷಿಸಿದರು.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಮತ್ತು ಆ ಪಕ್ಷದ ಇತರ ಆಕಾಂಕ್ಷಿಗಳು ಹರಡುತ್ತಿರುವ ಇಸ್ಲಾಂ ವಿರೋಧಿ ಭಾವನೆಗಳನ್ನು ತಡೆಯುವ ಪ್ರಯತ್ನವಾಗಿ ಒಬಾಮ ಮಸೀದಿಗೆ ಭೇಟಿ ನೀಡಿದ್ದಾರೆ.
‘‘ಒಂದು ಧರ್ಮದ ಮೇಲೆ ನಡೆಯುವ ದಾಳಿ ನಮ್ಮ ಎಲ್ಲ ಧರ್ಮಗಳ ಮೇಲೆ ನಡೆಯುವ ದಾಳಿ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು’’ ಎಂದು ಮೇರಿಲ್ಯಾಂಡ್‌ನ ಕ್ಯಾಟನ್ಸ್‌ವಿಲ್‌ನ ಮಸೀದಿಯಲ್ಲಿ ಮಾತನಾಡಿದ ಒಬಾಮ ಹೇಳಿದರು. ‘‘ಯಾವುದೇ ಧಾರ್ಮಿಕ ಗುಂಪಿನ ಮೇಲೆ ದಾಳಿ ನಡೆದಾಗ, ಅದರ ವಿರುದ್ಧ ದನಿ ಏರಿಸುವ ಜವಾಬ್ದಾರಿ ನಮ್ಮೆಲ್ಲರದ್ದು’’ ಎಂದರು.
  ಡಿಸೆಂಬರ್‌ನಲ್ಲಿ ಕ್ಯಾಲಿಫೋರ್ನಿಯದ ದಂಪತಿಯೊಂದು 14 ಮಂದಿಯನ್ನು ಕೊಂದ ಘಟನೆಯ ಬಳಿಕ, ಮುಸ್ಲಿಮರ ಅಮೆರಿಕ ಪ್ರವಾಸಕ್ಕೆ ತಾತ್ಕಾಲಿಕ ನಿಷೇಧ ವಿಧಿಸಬೇಕು ಎಂಬುದಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಕರೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಅಧ್ಯಕ್ಷೀಯ ಅಭ್ಯರ್ಥಿಯಾಗಲು ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಇತರ ಅಭ್ಯರ್ಥಿ ಆಕಾಂಕ್ಷಿಗಳೂ ಡೊನಾಲ್ಡ್ ಟ್ರಂಪ್ ದಾರಿಯಲ್ಲೇ ಸಾಗುತ್ತಿದ್ದಾರೆ. 10,000 ಸಿರಿಯ ನಿರಾಶ್ರಿತರಿಗೆ ದೇಶದಲ್ಲಿ ಆಶ್ರಯ ನೀಡುವ ಅಧ್ಯಕ್ಷ ಒಬಾಮರ ನಿಲುವನ್ನು ಅವರು ವಿರೋಧಿಸಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಪಾಯಗಳನ್ನು ಹುಟ್ಟು ಹಾಕುತ್ತದೆ ಎಂದು ಅವರು ವಾದಿಸುತ್ತಾರೆ.
ಮಸೀದಿಗಳು ತಮ್ಮದೇ ಪ್ರಾರ್ಥನಾಲಯಗಳಂತೆ ಇವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವಂತೆ, ಈ ವರೆಗೆ ಮಸೀದಿಗಳಿಗೆ ಹೋಗದ ಹಾಗೂ ಟಿವಿಯಲ್ಲಿ ವೀಕ್ಷಿಸುತ್ತಿರುವ ಅಮೆರಿಕನ್ನರಿಗೆ ಅಧ್ಯಕ್ಷರು ಕರೆ ನೀಡಿದರು.
 ‘‘ನಿಮ್ಮದೇ ಚರ್ಚ್ ಅಥವಾ ಸಿನಗಾಗ್ (ಯಹೂದಿಗಳ ಆರಾಧನಾಲಯ) ಅಥವಾ ದೇವಾಲಯಗಳನ್ನು ಕಲ್ಪಿಸಿಕೊಳ್ಳಿ ಹಾಗೂ ಇಂಥ ಮಸೀದಿಗಳು ಅವುಗಳಂತೆಯೇ ಇವೆ ಎಂಬುದನ್ನು ಗಮನಿಸಿ’’ ಎಂದರು.
ಒಬಾಮ ಮಾತನಾಡುವ ಮೊದಲು, ಓರ್ವ ಪುರುಷ ಮತ್ತು ಓರ್ವ ಮಹಿಳೆ ಕುರಾನ್‌ನ ವಚನಗಳನ್ನು ಪಠಿಸಿದರು. ಬಳಿಕ ಇಬ್ಬರು ಬಾಲಕರು ಮತ್ತು ಇಬ್ಬರು ಬಾಲಕಿಯರು ಅಮೆರಿಕ ಮತ್ತು ಮೇರಿಲ್ಯಾಂಡ್ ರಾಜ್ಯದ ಧ್ವಜಗಳನ್ನು ಎತ್ತಿಕೊಂಡು ಮಸೀದಿಯೊಳಗೆ ಹೋದರು. ಬಳಿಕ ಅಲ್ಲಿ ನೆರೆದಿದ್ದವರೆಲ್ಲರೂ ಅಮೆರಿಕದ ನಿಷ್ಠೆ ಘೋಷಣೆಯನ್ನು ಪಠಿಸಿದರು.

ನೀವು ಮುಸ್ಲಿಂ ಮತ್ತು ಅಮೆರಿಕನ್
ಯುವ ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡಿದ ಒಬಾಮ, ‘‘ನೀವು ಇಲ್ಲಿಗೆ ಸೇರಿದವರಾಗಿದ್ದೀರಿ ಮತ್ತು ಇಲ್ಲಿಯವರೇ’’ ಎಂದರು. ‘‘ನೀವು ‘ಒಂದೋ ಮುಸ್ಲಿಂ ಅಥವಾ ಅಮೆರಿಕನ್’ ಅಲ್ಲ, ನೀವು ‘ಮುಸ್ಲಿಂ ಮತ್ತು ಅಮೆರಿಕನ್’ ಎಂದು ಒಬಾಮ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News