ಜೂಲಿಯನ್ ಅಸಾಂಜ್ ಗೆ ವರದಾನವಾದ ವಿಶ್ವಸಂಸ್ಥೆಯ ತೀರ್ಪು

Update: 2016-02-04 16:02 GMT

ಲಂಡನ್, ಫೆ. 4: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ‘‘ನಿರಂಕುಶ ಬಂಧನದಲ್ಲಿಡಲಾಗಿದೆ’’ ಎಂದು ವಿಶ್ವಸಂಸ್ಥೆಯ ಸಮಿತಿಯೊಂದು ತೀರ್ಪು ನೀಡಿದೆ ಎಂದು ಬಿಬಿಸಿ ಗುರುವಾರ ವರದಿ ಮಾಡಿದೆ.


44 ವರ್ಷದ ಅಸಾಂಜ್ ವಿರುದ್ಧ 2010ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ವಿಚಾರಣೆಗೊಳಪಡಿಸಲು ಸ್ವೀಡನ್ ಬಯಸಿದೆ. ಈ ಆರೋಪವನ್ನು ಅವರು ನಿರಾಕರಿಸಿದ್ದು, ತನ್ನ ಗಡೀಪಾರನ್ನು ತಪ್ಪಿಸಲು ಅವರು 2012 ಜೂನ್‌ನಿಂದ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.


ತನ್ನನ್ನು ನಿರಂಕುಶ ಬಂಧನದಲ್ಲಿಡಲಾಗಿಲ್ಲ ಎಂಬುದಾಗಿ ಜಿನೇವದಲ್ಲಿರುವ ವಿಶ್ವಸಂಸ್ಥೆಯ ನಿರಂಕುಶ ಬಂಧನ ಕುರಿತ ಕ್ರಿಯಾ ಸಮಿತಿ ತೀರ್ಪು ನೀಡಿದರೆ ಶುಕ್ರವಾರ ತಾನು ಬ್ರಿಟಿಶ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಗುರುವಾರ ಅಸಾಂಜ್ ಹೇಳಿದ್ದರು.
‘‘ಒಂದು ವೇಳೆ, ಸರಕಾರಗಳು ಕಾನೂನುಬಾಹಿರವಾಗಿ ವರ್ತಿಸಿವೆ ಎಂಬ ತೀರ್ಪನ್ನು ವಿಶ್ವಸಂಸ್ಥೆ ಸಮಿತಿ ನೀಡಿದರೆ, ನನ್ನ ಪಾಸ್‌ಪೋರ್ಟನ್ನು ಕೂಡಲೇ ಹಿಂದಿರುಗಿಸಬೇಕು ಹಾಗೂ ನನ್ನನ್ನು ಬಂಧಿಸುವ ಪ್ರಯತ್ನಗಳನ್ನು ನಿಲ್ಲಿಸಬೇಕು’’ ಎಂದು ಹೇಳಿಕೆಯೊಂದರಲ್ಲಿ ಅವರು ಹೇಳಿದ್ದರು.
ಅಸಾಂಜ್ 2006ರಲ್ಲಿ ವಿಕಿಲೀಕ್ಸ್ ಸ್ಥಾಪಿಸಿದ್ದರು. ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳ ಕುರಿತ ಸುಮಾರು 5 ಲಕ್ಷ ರಹಸ್ಯ ಸೇನಾ ಕಡತಗಳು ಮತ್ತು 2.5 ಲಕ್ಷ ರಾಜತಾಂತ್ರಿಕ ಕೇಬಲ್‌ಗಳನ್ನು ವಿಕಿಲೀಕ್ಸ್ ಬಹಿರಂಗಪಡಿಸಿದ್ದು, ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿತ್ತು.
ಈಗ ವಿಶ್ವಸಂಸ್ಥೆಯ ಸಮಿತಿಯು ಅಸಾಂಜ್ ಪರವಾಗಿ ತೀರ್ಪು ನೀಡಿದ್ದು, ಅವರಿಗೆ ದೊಡ್ಡ ವರದಾನವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News