ಹೊಸದಿಲ್ಲಿ : ರೈಲ್ವೆ ಬಜೆಟ್‌ನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ:ಪ್ರಭು
ಹೊಸದಿಲ್ಲಿ,ಫೆ.4: 2016-17ನೇ ಸಾಲಿನ ರೈಲ್ವೆ ಮುಂಗಡ ಪತ್ರದಲ್ಲಿ ಅಪಘಾತಗಳನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ಬಲಗೊಳಿಸಲು ರೈಲ್ವೆಯು ಆದ್ಯತೆಯನ್ನು ನೀಡಲಿದೆ.
ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕಾಗಿ ಸಮಗ್ರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ರೈಲ್ವೆ ಸಚಿವ ಸುರೇಶ ಪ್ರಭು ಅವರು ತಿಳಿಸಿದರು. ಸಮಗ್ರತೆಯ ಪರಿಕಲ್ಪನೆಯ ವಿವರಗಳನ್ನು ಕೋರಿದಾಗ ಬಜೆಟ್ ಪ್ರಸ್ತಾವನೆಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು. ಫೆ.25ರಂದು ಪ್ರಭು ತನ್ನ ಎರಡನೆಯ ರೈಲ್ವೆ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
ಅಪಘಾತಗಳು ಸಂಭವಿಸಲೇಬಾರದು ಎನ್ನುವುದು ನಮ್ಮ ಗುರಿಯಾಗಿದೆ ಮತ್ತು ಈ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಇದಕ್ಕಾಗಿ ಹೊಸ ವೇದಿಕೆಯನ್ನು ಕಂಡುಕೊಳ್ಳಬೇಕಾಗುತ್ತದೆ ಮತ್ತು ದೀರ್ಘಾವಧಿಯ ಯೋಜನೆಯನ್ನು ರೂಪಿಸಬೇಕಾಗುತ್ತದೆ ಎಂದು ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಭು ತಿಳಿಸಿದರು.
ಅಪಘಾತಗಳ ಸಮಸ್ಯೆಯನ್ನು ಎದುರಿಸುತ್ತಿರುವ ರೈಲ್ವೆ ಅವುಗಳನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸುರಕ್ಷತೆಯನ್ನು ಹೆಚ್ಚಿಸಲು ಸಿಗ್ನಲ್ ವ್ಯವಸ್ಥೆ,ರೈಲುಗಳು ಸೇರಿದಂತೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಮತ್ತು ಮಾಹಿತಿ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಗಮನವನ್ನು ಹರಿಸಲಾಗುವುದು ಎಂದು ಅವರು ಹೇಳಿದರು.