×
Ad

ಜಮ್ಮು : ಹಿಮರಾಶಿಯಲ್ಲಿ ಕಾಣೆಯಾಗಿರುವ ಯೋಧರ ಪತ್ತೆ ಸಾಧ್ಯತೆ ಕ್ಷೀಣ,ಸೇನೆಯಿಂದ ನಮನ

Update: 2016-02-04 22:42 IST

ಜಮ್ಮು,ಫೆ.4: ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಿನ್ನೆ ಹಿಮಪಾತದ ಬಳಿಕ ಹಿಮದ ರಾಶಿಯಲ್ಲಿ ನಾಪತ್ತೆಯಾಗಿರುವ 10 ಯೋಧರನ್ನು ಪತ್ತೆ ಹಚ್ಚುವ ಸಾಧ್ಯತೆ ತುಂಬ ಕ್ಷೀಣವಾಗಿದೆ ಎಂದು ಸೇನೆಯು ಗುರುವಾರ ಹೇಳಿದೆ.

ಇದೊಂದು ದುರಂತಪೂರ್ಣ ಘಟನೆಯಾಗಿದೆ. ನಮ್ಮ ಗಡಿಗಳನ್ನು ರಕ್ಷಿಸಲು ಎಲ್ಲ ಸವಾಲುಗಳನ್ನು ಕೆಚ್ಚೆದೆಯಿಂದ ಎದುರಿಸಿದ ಮತ್ತು ಕರ್ತವ್ಯಕ್ಕಾಗಿ ತಮ್ಮ ಅಂತಿಮ ಬಲಿದಾನವನ್ನು ನೀಡಿರುವ ವೀರಯೋಧರಿಗೆ ನಮ್ಮ ನಮನಗಳು ಎಂದು ಸೇನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬುಧವಾರ ನಸುಕಿನಲ್ಲಿ ಒಂದು ಕಿ.ಮೀ.ಅಗಲ ಮತ್ತು 600 ಮೀ.ಎತ್ತರದ ಹಿಮದ ಗೋಡೆ ತಮ್ಮ ಸೇನಾನೆಲೆಯನ್ನು ಅಪ್ಪಳಿಸಿದ ಬಳಿಕ ನಾಪತ್ತೆಯಾಗಿರುವ ಯೋಧರಿಗಾಗಿ ರಕ್ಷಣಾ ಕಾರ್ಯಕರ್ತರು ಶ್ವಾನಗಳ ನೆರವಿನೊಂದಿಗೆ ಮೈನಸ್42-ಮೈನಸ್ 25 ಡಿ.ಸೆ.ತಾಪಮಾನದಲ್ಲಿ ಬೃಹತ್ ಹಿಮರಾಶಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

19,000 ಅಡಿ ಎತ್ತರದಲ್ಲಿ ಸೇನಾ ನೆಲೆ ಇದ್ದಲ್ಲಿ ಹಿಮದ ರಾಶಿ ಬಿಟ್ಟರೆ ಬೇರೇನೂ ಇಲ್ಲ ಎಂದು ಮೂಲಗಳು ತಿಳಿಸಿದವು.

ಯೋಧರ ಶೋಧಕ್ಕಾಗಿ ಪಾಕಿಸ್ತಾನವು ನೆರವಿನ ಕೊಡುಗೆಯನ್ನು ಮುಂದಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News