ಅಫ್ಘಾನ್‌ನಲ್ಲಿ ಭಾರತೀಯ ಹೆಲಿಕಾಪ್ಟರ್‌ಗಳ ಯಶಸ್ಸು: ಅಮೆರಿಕ ಜನರಲ್‌

Update: 2016-02-04 18:02 GMT

ವಾಶಿಂಗ್ಟನ್, ಫೆ. 4: ಭಾರತ ಅಫ್ಘಾನಿಸ್ತಾನಕ್ಕೆ ದೇಣಿಗೆ ನೀಡಿದ ಮೂರು ಎಂಐ-35 ವಿವಿಧೋದ್ದೇಶ ಹೆಲಿಕಾಪ್ಟರ್‌ಗಳು ಸಂಘರ್ಷಪೀಡಿತ ದೇಶದಲ್ಲಿ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದವು ಎಂದು ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಪಡೆಗಳ ನಿರ್ಗಮನ ಸೇನಾಪತಿ ಜನರಲ್ ಜಾನ್ ಕ್ಯಾಂಬೆಲ್ ಹೇಳಿದ್ದಾರೆ.
‘‘ಅಫ್ಘಾನಿಸ್ತಾನದಲ್ಲಿ ಭಾರತದ ಮೂರು ಎಂಐ-35 ವಿಮಾನಗಳಿವೆ. ಇನ್ನೊಂದನ್ನು ಅವರು ಶೀಘ್ರವೇ ಹೊಂದಲಿದ್ದಾರೆ. ಈ ಹೆಲಿಕಾಪ್ಟರ್‌ಗಳು ಹೆಚ್ಚಿನ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿವೆ’’ ಎಂದು ಅವರು ಹೇಳಿದರು.
ಅಫ್ಘಾನಿಸ್ತಾನಕ್ಕೆ ಸಂಬಂಧಿಸಿ ಅಮೆರಿಕದ ಕಾಂಗ್ರೆಸ್‌ನಲ್ಲಿ ಬುಧವಾರ ನಡೆದ ವಿಚಾರಣೆಯ ವೇಳೆ, ಸದನದ ಸಶಸ್ತ್ರ ಸೇವೆಗಳ ಸಮಿತಿಗೆ ಜನರಲ್ ಕ್ಯಾಂಬೆಲ್ ಈ ವಿವರಣೆ ನೀಡಿದರು.
ಎಂಐ-24 ಹೆಲಿಕಾಪ್ಟರ್‌ನ ವಿಸ್ತೃತ ಸುಧಾರಿತ ರೂಪವಾಗಿರುವ ಎಂಐ-35, ಸೈನಿಕರನ್ನು ಒಯ್ಯುವ ಸಾಮರ್ಥ್ಯವುಳ್ಳ ಹೆಲಿಕಾಪ್ಟರ್ ಗನ್‌ಶಿಪ್ ಆಗಿದೆ.
ಜನವರಿಯಲ್ಲಿ ಭಾರತದ ಮೂರು ಎಂಐ-35 ದಾಳಿ ಹೆಲಿಕಾಪ್ಟರ್‌ಗಳನ್ನು ಅಫ್ಘಾನ್ ವಾಯುಪಡೆಗೆ ನಿಯೋಜಿಸಲಾಗಿತ್ತು. ಈ ಹೆಲಿಕಾಪ್ಟರ್‌ಗಳು ತಾಲಿಬಾನ್ ಮುಂತಾದ ಬಂಡುಕೋರ ಗುಂಪುಗಳ ವಿರುದ್ಧದ ಹೋರಾಟದಲ್ಲಿ ಅಫ್ಘಾನ್ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ವೃದ್ಧಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಬೂಲ್‌ಗೆ ಭೇಟಿ ನೀಡಿದ್ದಾಗ, ಈ ಮೂರು ಹೆಲಿಕಾಪ್ಟರ್‌ಗಳನ್ನು ಅಫ್ಘಾನಿಸ್ತಾನಕ್ಕೆ ಉಡುಗೊರೆಯಾಗಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News