×
Ad

ತಾಂಜಾನಿಯಾ ಮಹಿಳೆಯ ಮೇಲೆ ದಾಳಿ ಪ್ರಕರಣ: ರಾಜ್ಯ ಸರಕಾರದಿಂದ ವರದಿ ಕೇಳಿದ ಕೇಂದ್ರ

Update: 2016-02-04 23:49 IST

ಹೊಸದಿಲ್ಲಿ,ಫೆ.4: ತಾಂಜಾನಿಯಾದ ಮಹಿಳೆಯೋರ್ವಳ ಮೇಲಿನ ಹಲ್ಲೆ ಪ್ರಕರಣದಿಂದ ಕಳವಳಗೊಂಡಿರುವ ಕೇಂದ್ರವು ಗುರುವಾರ ಕರ್ನಾಟಕ ಸರಕಾರದಿಂದ ವರದಿಯನ್ನು ಮತ್ತು ದುಷ್ಕರ್ಮಿಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ವಿವರಗಳನ್ನು ಕೇಳಿದೆ.
ಮಹಿಳೆಯ ರಕ್ಷಣೆಗೆ ಕೈಗೊಳ್ಳ ಲಾಗಿರುವ ಕ್ರಮಗಳ ಬಗ್ಗೆಯೂ ಕೇಂದ್ರ ಗೃಹಸಚಿವಾಲಯವು ವರದಿಯನ್ನು ಕೇಳಿದೆ. ಘಟನೆಯಲ್ಲಿ ವಿದೇಶಿ ಪ್ರಜೆ ಭಾಗಿ ಯಾಗಿರುವುದರಿಂದ ಕೇಂದ್ರ ಸರಕಾರವು ಅಗತ್ಯ ಕ್ರಮವನ್ನು ಕೈಗೊಳ್ಳಲು ಸಾಧ್ಯವಾದಷ್ಟು ಶೀಘ್ರ ವರದಿಯನ್ನು ರವಾನಿಸುವಂತೆ ಸಚಿವಾಲಯವು ತಾಕೀತು ಮಾಡಿದೆ. ಘಟನೆಯು ಗಂಭೀರ ರಾಜತಾಂತ್ರಿಕ ತಿರುವನ್ನು ಪಡೆದುಕೊಂಡಿದ್ದು, ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಐವರನ್ನು ಬಂಧಿಸಲಾಗಿದೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಘಟನೆಯ ಕುರಿತಂತೆ ತನ್ನೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದರು. ಸ್ವರಾಜ್ ಅವರಿಗೆ ವರದಿಯೊಂದನ್ನು ಕಳುಹಿಸಲಾಗುವುದು ಎಂದರು.

ಘಟನೆಯ ಕುರಿತು ದೂರನ್ನು ತಕ್ಷಣಕ್ಕೆ ಏಕೆ ದಾಖಲಿಸಿಕೊಂಡಿರಲಿಲ್ಲ ಎನ್ನುವುದರ ಬಗ್ಗೆ ವಿಚಾರಣೆ ನಡೆಸುವಂತೆ ತಾನು ಪೊಲೀಸರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು. ಅಧಿಕಾರಿಗಳು ತಪ್ಪು ಮಾಡಿದ್ದಿದ್ದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆಯೂ ಆದೇಶಿಸಿದ್ದೇನೆ ಎಂದರು.
ಇದೊಂದು ‘‘ಲಜ್ಜಾಸ್ಪದ ಘಟನೆ’’ ಎಂದು ಬಣ್ಣಿಸಿರುವ ಸ್ವರಾಜ್, ತಪ್ಪಿತಸ್ಥರಿಗೆ ಅತ್ಯಂತ ಕಠಿಣ ದಂಡನೆಯಾಗಬೇಕೆಂದು ಬಯಸಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸಹ ರಾಜ್ಯ ಸರಕಾರದಿಂದ ವರದಿಯನ್ನು ಕೇಳಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News