ಏಷ್ಯಾಕಪ್, ಟ್ವೆಂಟಿ-20 ವಿಶ್ವಕಪ್: ಇಂದು ಟೀಮ್ ಇಂಡಿಯಾ ಆಯ್ಕೆ
ಮುಂಬೈ, ಫೆ.3: ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾಕಪ್ ಟ್ವೆಂಟಿ-20 ಟೂರ್ನಮೆಂಟ್ ಹಾಗೂ ಭಾರತದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಸಂದೀಪ್ ಪಾಟೀಲ್ ಅಧ್ಯಕ್ಷತೆಯ ರಾಷ್ಟ್ರೀಯ ಆಯ್ಕೆ ಸಮಿತಿ ಫೆ.5 ರಂದು ದಿಲ್ಲಿಯಲ್ಲಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದೆ.
ಏಷ್ಯಾಕಪ್ ಫೆ.24 ರಿಂದ ಮಾ.6ರ ತನಕ ಬಾಂಗ್ಲಾದೇಶದಲ್ಲಿ ನಡೆಯುವುದು. ಮೀರ್ಪುರದಲ್ಲಿ ನಡೆಯಲಿರುವ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶವನ್ನು ಎದುರಿಸಲಿದೆ. ಫೆ.27 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು, ಮಾ.1 ರಂದು ಶ್ರೀಲಂಕಾ ಹಾಗೂ ಮಾ.3 ರಂದು ಅರ್ಹತಾ ಸುತ್ತಿನಲ್ಲಿ ವಿಜೇತವಾಗುವ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಈ ಬಾರಿ ಇದೇ ಮೊದಲ ಬಾರಿ 50 ಓವರ್‌ಗಳ ಬದಲಿಗೆ ಟ್ವೆಂಟಿ-20 ಮಾದರಿಯಲ್ಲಿ ನಡೆಯಲಿದೆ. ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್ ಮಾ.8 ರಿಂದ ಆರಂಭವಾಗಲಿದೆ. ಸೂಪರ್ 10 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಭಾರತ ಮಾ.15 ರಂದು ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಆಡಲಿದೆ.
ಆಸ್ಟ್ರೇಲಿಯ ಪ್ರವಾಸದಲ್ಲಿ ಆಯ್ಕೆ ಮಾಡಲಾದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ವೇಗದ ಬೌಲರ್ ಮುಹಮ್ಮದ್ ಶಮಿ ಇನ್ನೂ ಚೇತರಿಸಿಕೊಳ್ಳದ ಕಾರಣ ಗುಜರಾತ್‌ನ ಜಸ್ಪ್ರೀತ್ ಬುಮ್ರಾ ಆಯ್ಕೆಯಾಗಬಹುದು. ಬುಮ್ರಾ ಬೌಲಿಂಗ್ ಮಾತ್ರವಲ್ಲದೆ ವಿಕೆಟ್‌ಕೀಪಿಂಗ್ ಕೂಡ ನಡೆಸಬಲ್ಲರು.
ಸಂಭಾವ್ಯ ತಂಡ: ಎಂಎಸ್ ಧೋನಿ(ನಾಯಕ/ವಿಕೆಟ್‌ಕೀಪರ್), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ/ಮನೀಷ್ ಪಾಂಡೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್.ಅಶ್ವಿನ್, ಜಸ್ಪ್ರೀತ್ ಬುಮ್ರಾ, ಆಶೀಷ್ ನೆಹ್ರಾ, ಹರ್ಭಜನ್ ಸಿಂಗ್, ಭುವನೇಶ್ವರ ಕುಮಾರ್/ಮೋಹಿತ್ ಶರ್ಮ, ಪವನ್ ನೇಗಿ.