ಶಂಕಿತ ಭಯೋತ್ಪಾದಕ ಬಾಂಬ್ ಸ್ಫೋಟಗಳ ಮಾಹಿತಿ ಸಂಗ್ರಹಿಸುತ್ತಿದ್ದ: ಎಟಿಎಸ್
ಪಣಜಿ,ಫೆ.4: ಭಯೋತ್ಪಾದಕನೆಂಬ ಶಂಕೆಯ ನೆಲೆಯಲ್ಲಿ ವಾಸ್ಕೋ ರೈಲ್ವೆ ನಿಲ್ದಾಣದಿಂದ ಬಂಧಿಸಲ್ಪಟ್ಟಿರುವ ನಿವೃತ್ತ ಸೇನಾಧಿಕಾರಿಯ ಪುತ್ರ ಸಮೀರ್ ಸರ್ದಾನಾ(44) ಈ ಹಿಂದೆ ದೇಶಾದ್ಯಂತ ಸಂಭವಿಸಿದ್ದ ಬಾಂಬ್ ಸ್ಫೋಟಗಳ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ಎಂದು ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ದ ಹಿರಿಯ ಅಧಿಕಾರಿಯೋರ್ವರು ಗುರುವಾರ ಇಲ್ಲಿ ತಿಳಿಸಿದರು.
ಆದರೆ ಈವರೆಗಿನ ವಿಚಾರಣೆಯಲ್ಲಿ ಸರ್ದಾನಾಗೂ ಭಯೋತ್ಪಾದನೆಗೂ ನಂಟಿರುವ ಬಗ್ಗೆ ಯಾವುದೇ ಸಾಕ್ಷಾಧಾರ ಲಭ್ಯವಾಗಿಲ್ಲ.
ಆರೋಪಿ ಸರ್ದಾನಾನ ಇ-ಮೇಲ್‌ಗಳು ಮತ್ತು ದಾಖಲೆಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತ ಈ ಹಿಂದೆ ದೇಶದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟಗಳ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿ ತಿಳಿಸಿದರು.
ಮುಂಬೈ ನಿವಾಸಿಯಾಗಿರುವ ಸರ್ದಾನಾ ಹಾಂಕಾಂಗ್, ಮಲೇಷಿಯಾ ಮತ್ತು ಸೌದಿ ಅರೇಬಿಯಾಗಳಲ್ಲಿ ನಿಯೋಜನೆಗಳೊಂದಿಗೆ ಅಸೆಂಚರ್‌ನಂತಹ ಬಹುರಾಷ್ಟ್ರೀಯ ಕಂಪೆನಿಗಳಿಗಾಗಿ ಕೆಲಸ ಮಾಡಿದ್ದಾನೆ ಎಂದರು.
ಡೆಹರಾಡೂನಿನ ಮಾಜಿ ಸೇನಾಧಿಕಾರಿಯ ಪುತ್ರನಾಗಿರುವ ಸರ್ದಾನಾ ಜನ್ಮದಿಂದ ಹಿಂದೂ ಆಗಿದ್ದರೂ ಇಸ್ಲಾಮ್ ಧರ್ಮವನ್ನು ಪಾಲಿಸುತ್ತಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಆತನ ಬಳಿಯಿದ್ದ ಐದು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಅವುಗಳನ್ನು ಪರಿಶೀಲನೆಗಾಗಿ ಸೈಬರ್ ಅಪರಾಧ ಘಟಕಕ್ಕೆ ಕಳುಹಿಸಿದ್ದಾರೆ.
ಸರ್ದಾನಾನನ್ನು ಸಿಆರ್‌ಪಿಸಿ ಕಲಂ 41(ಮುಂಜಾಗ್ರತೆ ಬಂಧನ)ರಡಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.