×
Ad

ಬೆಂಗಳೂರು ಘಟನೆ: ತನಿಖೆಗೆ ಕೇಂದ್ರ ಆದೇಶ

Update: 2016-02-05 08:41 IST

ನವದೆಹಲಿ: ಬೆಂಗಳೂರಿನಲ್ಲಿ ತಾಂಜಾನಿಯಾದ ಯುವತಿ ಮೇಲೆ ಸಾಮೂಹಿಕ ದೌರ್ಜ್ಯನ್ಯದ ಬಗ್ಗೆ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಯುವತಿಯನ್ನು ಹೊರಕ್ಕೆಳೆದು ಹಲ್ಲೆ ನಡೆಸಿ ನಗ್ನವಾಗಿ ಕಳೆದ ವಾರ ಮೆರವಣಿಗೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು ಜನಾಂಗೀಯ ಹಲ್ಲೆ ಎಂದು ಬಣ್ಣಿಸಲಾಗಿದೆ.
ಗೃಹ ಸಚಿವ ಜಿ,ಪರಮೇಶ್ವರ್ ಅವರು ಪತ್ರಿಕಾಗೋಷ್ಠಿಯಲ್ಲಿ ಆಕೆಯ ಹೆಸರು ಬಹಿರಂಗಪಡಿಸಿದ್ದಲ್ಲದೇ ಆಕೆಯ ಆರೋಪಗಳನ್ನು ಅಲ್ಲಗಳೆದದ್ದು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಐದು ಮಂದಿ ಶಂಕಿತರನ್ನು ಈ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರೂ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಹಾಗೂ ಮಹಿಳಾ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.


ಕಳೆದ ಭಾನುವಾರ ರಾತ್ರಿ ಸಂತ್ರಸ್ತೆ ಹಾಗೂ ತಾಂಜಾನಿಯಾ ಮೂಲದ ಇತರ ಮೂವರು ವಿದ್ಯಾರ್ಥಿಗಳು ನಗರದ ಹೊರವಲಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಅದೇ ಪ್ರದೇಶದಲ್ಲಿ ಸೂಡಾನ್ ಚಾಲಕನೊಬ್ಬ ಸ್ಥಳೀಯ ಮಹಿಳೆಯ ಮೇಲೆ ಕಾರು ಹರಿಸಿದ್ದರಿಂದ ಆಕ್ರೋಶಗೊಂಡ ಸ್ಥಳೀಯರು ಈ ಕೃತ್ಯ ಎಸಗಿದ್ದಾರೆ ಎಂದು ಆಪಾದಿಸಲಾಗಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಆಫ್ರಿಕನ್ ದೇಶಗಳ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.


"ಭಾರತದಲ್ಲಿನ ತಾಂಜಾನಿಯಾ ಹೈಕಮಿಷನರ್ ಸೇರಿದಂತೆ ಉನ್ನತ ಮಟ್ಟದ ನಿಯೋಗ ಬೆಂಗಳೂರಿಗೆ ಭೇಟಿ ನೀಡಲಿದೆ" ಎಂದು ವಕ್ತಾರ ವಿಕಾಸ್ ಸ್ವರೂಪ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ಪೊಲೀಸರ ಸಹಾಯ ಯಾಚಿಸಿದರೂ ಪೊಲೀಸರು ನೆರವಿಗೆ ಮುಂದಾಗಲಿಲ್ಲ ಎಂದು ವಿದ್ಯಾರ್ಥಿನಿ ಹೇಳಿಕೆ ನೀಡಿರುವುದು ಪೊಲೀಸರ ಮೇಲೂ ಸಂಶಯಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡದಂತೆ ಪೊಲೀಸರು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ.
ಇದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ತಾಂಜಾನಿಯಾ ಹೈಕಮಿಷನರ್ ಜಾನ್ ಕಿಜಾಗಿಯವರು, "ಅವರು ಕರಿಯರು ಎಂಬ ಕಾರಣಕ್ಕೆ ಹಲ್ಲೆ ನಡೆದಿದೆ" ಎಂದು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News