ವಿಮಾನದಲ್ಲಿ ಸೋನು ನಿಗಮ್ ಸಂಗೀತ: ಜೆಟ್ ಸಿಬ್ಬಂದಿ ಅಮಾನತು
ನವದೆಹಲಿ: ವಿಮಾನದ ಘೋಷಣಾ ವ್ಯವಸ್ಥೆ ಮೂಲಕ ಸೋನು ನಿಗಮ್ ಹಾಡಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ಜೆಟ್ ಏರ್‌ವೇಸ್ ಐದು ಮಂದಿ ಗಗನಸಖಿಯರನ್ನು ಅಮಾನತು ಮಾಡಿದೆ.
ಜನವರಿ 4ರಂದು ಜೋಧ್‌ಪುರ- ಮುಂಬೈ ಚಾರ್ಟರ್ಡ್ ವಿಮಾನದಲ್ಲಿ ಈ ಘಟನೆ ನಡೆದಿತ್ತು. ಪರಸ್ಪರ ಪರಿಚಿತರಾಗಿದ್ದ ಎಲ್ಲ ಪ್ರಯಾಣಿಕರು ಸೋನು ನಿಗಮ್ ಅವರು ಹಾಡುವಂತೆ ಒತ್ತಾಯಿಸಿದರು. ಇದಕ್ಕೆ ಓಗೊಟ್ಟ ಸೋನು ನಿಗಮ್ ಎರಡು ಹಾಡುಗಳನ್ನು ಹಾಡಿದ್ದರು. ಯಶ್‌ರಾಜ್ ಅವರ ವೀರ್ ಝರಾ ಚಿತ್ರದ ದೋ ಪಾಲ್ ರೂಕ.. ಹಾಗೂ ಅಭಿಷೇಕ್ ಬಚ್ಚನ್ ಅವರ ರೆಫ್ಯುಜಿ ಚಿತ್ರದ ಪಂಚಿ ನಾದಿಯಾ ಹಾಡು ಹಾಡಿದ್ದರು. ಸೋನು ಅವರ ಜತೆ ಪ್ರಯಾಣಿಕರೆಲ್ಲ ದನಿಗೂಡಿಸಿದಾಗ, "ನೀವು ಕೂಡಾ ಹಾಡಬಲ್ಲಿರಿ. ಇಲ್ಲಿ ಎಲ್ಲರೂ ಗಾಯಕರೇ" ಎಂದು ನಿಗಮ್ ಹೇಳಿ ಇಂಪಾಗಿ ಹಾಡಿದ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು, ಇದು ವಿಮಾನದ ವ್ಯವಸ್ಥೆಯ ದುರ್ಬಳಕೆ ಎಂಬ ನಿರ್ಧಾರಕ್ಕೆ ಬಂದು ಇದಕ್ಕೆ ಅವಕಾಶ ನೀಡಿದ ಗಗನಸಖಿಯರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಇದು ವಿಮಾನದ ಸುರಕ್ಷತೆಗೆ ಅಪಾಯ ಎಂದು ನಿಯಂತ್ರಕರು ಅಭಿಪ್ರಾಯಪಟ್ಟಿದ್ದಾರೆ.