×
Ad

ಜಿಲ್ಲಾಧಿಕಾರಿ ಜತೆ ಸೆಲ್ಫಿ ಮೋಹ: ಯುವಕ ಜೈಲು ಪಾಲು

Update: 2016-02-05 08:52 IST

ಮೀರಠ್: ಸೆಲ್ಫಿಯ ವಿಚಿತ್ರ ಹುಚ್ಚಿನಿಂದ ಯುವಕ ಜೈಲುಪಾಲಾದ ಘಟನೆ ನಡೆದಿದೆ. ಮೀರಠ್‌ನ 18 ವರ್ಷ ವಯಸ್ಸಿನ ಫರಾಜ್ ಅಹ್ಮದ್ ಎಂಬಾತ ಜಿಲ್ಲಾಧಿಕಾರಿ ಜತೆ ಸೆಲ್ಫಿ ತೆಗೆಸಿಕೊಳ್ಳಲು ಹೋಗಿ ಈ ಎಡವಟ್ಟು ಮಾಡಿಕೊಂಡಿದ್ದಾನೆ.


ಉತ್ತರಪ್ರದೇಶದ ಬಾಲಂದ್‌ಶಹರ್ ಜಿಲ್ಲಾಧಿಕಾರಿ ಬಿ.ಚಂದ್ರಕಲಾ ಜತೆ ಸೆಲ್ಫಿ ಕ್ಲಿಕ್ಕಿಸುವ ಅತ್ಯುತ್ಸಾಹದಲ್ಲಿ ಅವರ ತೀರಾ ಸನಿಹಕ್ಕೆ ಬಂದಿದ್ದ. ಇದಕ್ಕೆ ಜಿಲ್ಲಾಧಿಕಾರಿ ಆಕ್ಷೇಪಿಸಿ ಆತನ ವಿರುದ್ಧ ಕ್ರಮಕ್ಕೆ ಆದೇಶಿಸಿದರು. "ನಾನು ಜಿಲ್ಲಾಧಿಕಾರಿಯಾಗಿರುವ ಜತೆಗೆ ಮಹಿಳೆ ಕೂಡಾ. ಮಹಿಳೆಯ ಗೌರವವನ್ನು ಎಲ್ಲರೂ ರಕ್ಷಿಸಬೇಕು" ಎಂದು ಚಂದ್ರಕಲಾ ಹೇಳಿದ್ದರು.


ಚಂದ್ರಕಲಾ ತಮ್ಮ ಕಚೇರಿಯಲ್ಲಿ ಕೆಲ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾಗ ಅವರ ಸನಿಹಕ್ಕೆ ಹೋದ ಆರೋಪದಲ್ಲಿ ಸೋಮವಾರ ಅಹ್ಮದ್‌ನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಘಟನೆ ಸಂಜೆ ನಡೆದಿದ್ದು, ಕಮಲಾಪುರ ಗ್ರಾಮದ ಅಹ್ಮದ್, ಕೆಲ ಹಿರಿಯರ ಜತೆಗೆ ಕಚೇರಿ ಕೆಲಸಕ್ಕಾಗಿ ಬಂದಿದ್ದ. ಆಗ ಜಿಲ್ಲಾಧಿಕಾರಿ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ. ಆ ಸಂದರ್ಭದಲ್ಲಿ ವಿವೇಕದಿಂದ ವರ್ತಿಸುವಂತೆ ಹಲವು ಬಾರಿ ಹೇಳಿದರೂ ಆತ ಗಮನ ಕೊಡಲಿಲ್ಲ" ಎಂದು ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ವಿಶಾಲ್ ಕುಮಾರ್ ಹೇಳಿದರು.


ಯುವಕನ ನಡವಳಿಕೆ ಆಕ್ಷೇಪಾರ್ಹವಾಗಿತ್ತು. ಸೆಲ್ಫಿ ಕ್ಲಿಕ್ಕಿಸಿದ್ದರ ವಿರುದ್ಧ ದೂರು ನೀಡಿಲ್ಲ. ಆದರೆ ಆತ ಸೃಷ್ಟಿಸಿದ ಆವಾಂತರದ ವಿರುದ್ಧ ಕ್ರಮಕ್ಕೆ ಸೂಚಿಸಿ, ಆ ಫೋಟೊ ನಾಶಪಡಿಸುವಂತೆ ಸೂಚಿಸಲಾಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದರೂ, ಪರಿಪೂರ್ಣ ಚಿತ್ರಕ್ಕಾಗಿ ಪದೇ ಪದೇ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಚಂದ್ರಕಲಾ ಹೇಳಿದರು. ಯುವಕನ ವಿರುದ್ಧ ಅಪರಾಧ ದಂಡಸಂಹಿತೆಯ ಸೆಕ್ಷನ್ 151ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News