ಪೂಜೆ ರದ್ದು ಮಾಡಿ ಕೊಲೆಯಾದ ಶಬ್ಬೀರ್ ಗೆ ಗೌರವ ಸಲ್ಲಿಸಿದ ದೇವಸ್ಥಾನ !
ತಿರುವನಂತಪುರಮ್ , ಫೆ ೫ : ಕೇರಳದಲ್ಲಿ ಮುಸ್ಲಿಂ ಯುವಕನೊಬ್ಬನನ್ನು ಬರ್ಬರವಾಗಿ ಹೊಡೆದು ಕೊಂದ ವೀಡಿಯೋ ಕಳೆದ ವಾರ ದೇಶಾದ್ಯಂತ ಭಾರೀ ಚರ್ಚೆಗೆ ಒಳಗಾಗಿತ್ತು. ಆತನ ಊರಿನ ದೇವಸ್ಥಾನವೊಂದು ಆತನಿಗೆ ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸಿದೆ. ಮೃತ ಎಂ ವಿ ಶಬ್ಬೀರ್ ಗೌರವಾರ್ಥ ಎರಡು ದಿನಗಳ ತನ್ನ ಪೂಜಾ ಕಾರ್ಯಕ್ರಮಗಳನ್ನು ಅದು ರದ್ದು ಪಡಿಸುವ ಮೂಲಕ ಕೋಮುವಾದಿಗಳಿಗೆ ಚಾಟಿ ಬೀಸಿದೆ.
ರಾಜಧಾನಿ ತಿರುವನಂತಪುರಮ್ ಸಮೀಪದಲ್ಲೇ ನಾಲ್ಕು ಮಂದಿ ಸೇರಿ ಯುವಕನೊಬ್ಬನನ್ನು ಬಡಿಗೆಗಳಿಂದ ಅಮಾನುಷವಾಗಿ ಹೊಡೆದು ಕೊಲ್ಳುವ ವೀಡಿಯೋ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೊಂದು ಗ್ಯಾಂಗ್ ವಾರ್ ಎಂದು ಪೊಲೀಸರು ಆಗ ಹೇಳಿದ್ದರು. ಕೂಡಲೇ ಶಬ್ಬೀರ್ ನನ್ನು ಆಸ್ಪತ್ರೆಗೆ ದಾರಿಹೋಕರು ಕರೆದುಕೊಂಡು ಹೋದರೂ ಆಟ ಬದುಕುಳಿಯಲಿಲ್ಲ. ಘಟನೆಯನ್ನು ಚಿತ್ರೀಕರಿಸಿದ ವ್ಯಕ್ತಿಯೊಬ್ಬ ತನಗೆ ಆತನನ್ನು ಬಚಾವ್ ಮಾಡಲು ಹೋಗುವ ಧೈರ್ಯ ಬರಲಿಲ್ಲ. ಅದಕ್ಕಾಗಿ ಸಾಕ್ಷ್ಯ ದಾಖಲಿಸಲು ವೀಡಿಯೋ ರೆಕಾರ್ಡ್ ಮಾಡಿದೆ ಎಂದು ಹೇಳಿದ್ದ.
ಶಬ್ಬೀರ್ ನ ಊರಿನಲ್ಲಿದ್ದ ಶಿವನ ದೇವಾಲಯದ ವಾರ್ಷಿಕ ಹಬ್ಬ ಆಚರಿಸಲು ಆತ ಸದಾ ಸಹಕಾರ ನೀಡುತ್ತಿದ್ದ ಎಂದು ಹೇಳಲಾಗಿದೆ. ಆದ್ದರಿಂದ ಸೋಮವಾರ ಹಾಗು ಮಂಗಳವಾರ ದೇವಸ್ಥಾನದಲ್ಲಿ ಶಂಖ ಊದಲಿಲ್ಲ , ಗಂಟೆ ಬಾರಿಸಲಿಲ್ಲ . ದಿನಕ್ಕೆ ಐದು ಬಾರಿ ಪೂಜೆ ನಡೆಯುವ ಈ ದೇವಸ್ಥಾನದಲ್ಲಿ ಈ ಎರಡು ದಿನ ಆ ಪೂಜೆಗಳನ್ನೂ ನಡೆಸದೇ ಇರಲು ಈ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ನಿರ್ಧರಿಸಿ ಹಾಗೆ ಮಾಡಿದರು.
ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ.