×
Ad

ಚುನಾವಣಾ ಸೋಲಿನ ಸೇಡಿಗಾಗಿ ಸಂಸತ್ ಕಲಾಪಕ್ಕೆ ತಡೆಯೊಡ್ಡುತ್ತಿರುವ ಗಾಂಧಿ ಕುಟುಂಬ:ಮೋದಿ

Update: 2016-02-05 21:37 IST

ಮೋರಾನ್,ಫೆ.5: ಶುಕ್ರವಾರ ಇಲ್ಲಿ ಸೋನಿಯಾ ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡು ತೀವ್ರ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಕಾಂಗ್ರೆಸ್ ಆಧ್ಯಕ್ಷೆ ಮತ್ತು ಅವರ ಪುತ್ರ ರಾಹುಲ ಗಾಂಧಿ 2014ರ ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಂಸತ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡುತ್ತಿದ್ದಾರೆ ಮತ್ತು ಅದಕ್ಕಾಗಿಯೇ ಬಡವರಿಗೆ ಉಪಕಾರಿಯಾಗಲಿರುವ ಮಸೂದೆಗಳ ಅಂಗೀಕಾರಕ್ಕೆ ತಡೆಯನ್ನೊಡ್ಡುತ್ತಿದಾರೆ ಎಂದು ಆರೋಪಿಸಿದರು.
ಚುನಾವಣೆ ಸನ್ನಿಹಿತವಾಗಿರುವ ಅಸ್ಸಾಮಿನಲ್ಲಿ ಚಹಾತೋಟಗಳ ಕಾರ್ಮಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್‌ನ್ನು ಹೊರತುಪಡಿಸಿ ಇತರ ರಾಜಕೀಯ ಪಕ್ಷಗಳ ನಾಯಕರು ತನ್ನನ್ನು ವಿರೋಧಿಸುತ್ತಾರಾದರೂ ಸಂಸತ್ತು ಕಾರ್ಯ ನಿರ್ವಹಿಸಬೇಕೆಂದು ಅವರು ಬಯಸುತ್ತಿದ್ದಾರೆ. ಆದರೆ ‘‘ಒಂದು ಕುಟುಂಬ’’ಮಾತ್ರ ‘‘ನಕಾರಾತ್ಮಕ ರಾಜಕೀಯ’’ದಲ್ಲಿ ತೊಡಗಿದೆ ಎಂದು ಆಪಾದಿಸಿದರು.
  ಚುನಾವಣೆಯಲ್ಲಿ ಸೋತು 400ರಿಂದ 40 ಸ್ಥಾನಗಳಿಗಿಳಿದವರು ಮೋದಿಯನ್ನು ಕೆಲಸ ಮಾಡಲು ಬಿಡಬಾರದೆಂದು ನಿರ್ಧರಿಸಿದ್ದಾರೆ. ಅಡಚಣೆಗಳನ್ನು ಮತ್ತು ಸಮಸ್ಯೆಗಳನ್ನು ಸೃಷ್ಟಿಸಲು ಅವರು ನಿರ್ಧರಿಸಿದ್ದಾರೆ.ಅದಕ್ಕಾಗಿಯೇ ಪಿತೂರಿ ನಡೆಯುತ್ತಿದೆ ಎಂದು ಅವರು ಕಾಂಗ್ರೆಸ್‌ನ್ನು ಸ್ಪಷ್ಟವಾಗಿ ಪ್ರಸ್ತಾಪಿಸಿ ಹೇಳಿದರು.
ಈಗ ಅವರು ತಮ್ಮನ್ನು ಸೋಲಿಸಿರುವ ಜನತೆಯ ವಿರುದ್ಧ ಪ್ರತೀಕಾರಕ್ಕೆ ನಿರ್ಧರಿಸಿದ್ದಾರೆ ಎಂದು ಗಾಂಧಿ ಕುಟುಂಬದ ಹೆಸರೆತ್ತದೆ ಮೋದಿ ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News