ಯುವರಾಜ್ ನೇತೃತ್ವದ ಕ್ಯಾನ್ಸರ್ ಜಾಗೃತಿ ಅಭಿಯಾನಕ್ಕೆ ಸಚಿನ್, ಕೊಹ್ಲಿ ಸಾಥ್
ಹೊಸದಿಲ್ಲಿ, ಫೆ.5: ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್‌ಪೀಡಿತ 100 ಮಕ್ಕಳಿಗೆ ಶಿಕ್ಷಣ ನೀಡುವ ಯುವರಾಜ್ ಸಿಂಗ್‌ರ ಜಾಗೃತಿ ಅಭಿಯಾನಕ್ಕೆ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ಝಹೀರ್ ಖಾನ್ ಕೈ ಜೋಡಿಸಿದ್ದಾರೆ.
ವಿಶ್ವ ಕ್ಯಾನ್ಸರ್ ದಿನವಾದ ಗುರುವಾರ ಯುವರಾಜ್ ಸಿಂಗ್ ಅವರು ‘ಟುಗೆದರ್ ವಿ ಕ್ಯಾನ್’ ಹಾಗೂ ‘ಡಿಸೈಯರ್ಡ್ ವಿಂಗ್ಸ್ ಡಾಟ್‌ಕಾಮ್’ ಅಭಿಯಾನಕ್ಕೆ ಚಾಲನೆ ನೀಡಿದರು.
ಕ್ಯಾನ್ಸರ್ ವಿರುದ್ಧ ಹೋರಾಡಿ ಎಂದು ಜನತೆಗೆ ಕರೆ ನೀಡಿರುವ ಯುವರಾಜ್ ಸಿಂಗ್ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗಲು ಸಹಾಯ ಧನ ನೀಡುವಂತೆಯೂ ವಿನಂತಿಸಿಕೊಂಡಿದ್ದಾರೆ.
ಸಹಾಯ ನಿಧಿಯಲ್ಲಿ ಸಂಗ್ರಹವಾಗುವ ಹಣವನ್ನು 100 ಶಾಲಾ ಮಕ್ಕಳಿಗೆ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ. ಕ್ಯಾನ್ಸರ್ ಪೀಡಿತ ಕುಟುಂಬ ಕೂಡಿಟ್ಟ ಎಲ್ಲ ಹಣವೂ ಚಿಕಿತ್ಸೆಗೆ ವ್ಯಯವಾಗುವ ಕಾರಣ ಮಕ್ಕಳ ಶಿಕ್ಷಣಕ್ಕೆ ಹಣದ ಕೊರತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗೆ ಮುಂದಾಗಲು ಈ ಉಪಕ್ರಮವನ್ನು ಆರಂಭಿಸಲಾಗಿದೆ.
‘‘ನನ್ನ ಎಲ್ಲ ಶತಕಗಳಿಗಿಂತಲೂ ಕ್ಯಾನ್ಸರ್ ಪೀಡಿತ 100 ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು ಹೆಚ್ಚು ಹೆಮ್ಮೆ ತರುವ ವಿಷಯವಾಗಿದೆ. ಕ್ಯಾನ್ಸರ್ ವಿರುದ್ಧ ಬ್ಯಾಟಿಂಗ್ ಮಾಡಲು ಎಲ್ಲರೂ ತನ್ನೊಂದಿಗೆ ಕೈಜೋಡಿಸಬೇಕು. ಈ ಮೂಲಕ ಸಂತ್ರಸ್ತರಿಗೆ ಸಮಾಧಾನ ಹೇಳಬಹುದು. ‘ಟುಗೆದರ್ ವಿ ಕ್ಯಾನ್’ ಅಭಿಯಾನಕ್ಕೆ ಕಾಣಿಕೆ ನೀಡಬಹುದು’’ ಎಂದು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿರುವ ಯುವಿ ಹೇಳಿದ್ದಾರೆ.
‘ಟುಗೆದರ್ ವಿ ಕ್ಯಾನ್’ ಅಭಿಯಾನದ ಮೂಲಕ ಈಗಾಗಲೇ 2.5 ಕೋಟಿ ರೂ. ಸಂಗ್ರಹಿಸಲಾಗಿದೆ.