ಜಾರ್ಖಂಡ್‌ನಲ್ಲಿ 11 ಅಪೂರ್ವ ಪ್ರಭೇದಗಳ ಹಕ್ಕಿಗಳು ಪತ್ತೆ
ರಾಂಚಿ, ಫೆ.6: ಅಳಿವಿನಂಚಿನಲ್ಲಿವೆಯೆಂದು ಭಾವಿಸಲಾಗಿದ್ದ 11 ಅಪೂರ್ವ ಪ್ರಭೇದಗಳ ಹಕ್ಕಿಗಳು ಜಾರ್ಖಂಡ್‌ನ ಜಲ ಮೂಲಗಳ ಸಮೀಕ್ಷೆಯೊಂದರ ವೇಳೆ ಪತ್ತೆಯಾಗಿವೆಯೆಂದು ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್‌ನ ಜಲ ಮೂಲಗಳು ಕಳೆದ ವರ್ಷ 29 ಪ್ರಭೇದಗಳಿಗೆ ಸೇರಿದ್ದ ಸುಮಾರು 37 ಸಾವಿರ ವಲಸೆ ಹಕ್ಕಿಗಳನ್ನು ಆಕರ್ಷಿಸಿದ್ದವೆಂದು ಜಾರ್ಖಂಡ್‌ನ ಅರಣ್ಯ ಇಲಾಖೆಯ ಪರವಾಗಿ ನಡೆಸಲಾಗಿದ್ದ ಸಮೀಕ್ಷೆಯೊಂದರಲ್ಲಿ ಕಂಡುಬಂದಿದೆ.
2015ರ ಏಶ್ಯನ್ ಪಕ್ಷಿ ಸಮೀಕ್ಷೆಯ ಪ್ರಕಾರ, ರಾಜ್ಯದ 25 ಅಣೆಕಟ್ಟುಗಳು ಸಹಿತ ಜಲಾಶಯಗಳು ಮತ್ತು ಇತರ ಜಲ ಮೂಲಗಳ ಸುತ್ತ ಇರುವ ಪಕ್ಷಿಗಳ ಸಂಖ್ಯೆ 71,134.
ಜಲ ಮೂಲಗಳ ಬಳಿ ಗಟ್ಟಿಯಾದ ಸಂಗೀತ ಹಾಗೂ ಇತರ ಗದ್ದಲಗಳು ಹಕ್ಕಿಗಳನ್ನು ಹೆದರಿ ಓಡುವಂತೆ ಮಾಡುತ್ತವೆ. ಅದರಿಂದಾಗಿ ಸಂಖ್ಯೆಯನ್ನು ಸರಿಯಾಗಿ ಲೆಕ್ಕ ಹಾಕಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಪಕ್ಷಿ ಸಮೀಕ್ಷೆ ಫೆಬ್ರವರಿಯಲ್ಲಿ ಪೂರ್ಣಗೊಂಡಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.
ಡುಮ್ಕಾದ ಮಸ್ಸಂಜೋರ್ ಅಣೆಕಟ್ಟಿಗೆ ಅತಿ ಹೆಚ್ಚು ಹಕ್ಕಿಗಳು ಭೇಟಿ ನೀಡಿವೆ. ಅವುಗಳ ಸಂಖ್ಯೆ 9,564. ಆ ಬಳಿಕ ಚಂಡಿಲ್‌ಗೆ 7,896. ಉದ್ಧವ್‌ಗೆ 7,723 ಹಕ್ಕಿಗಳು ವಲಸೆ ಬಂದಿದ್ದವು. ತಿಲೈಯಾ ಹಾಗೂ ಪತ್ರಾಟು ಅಣೆಕಟ್ಟುಗಳು ಪಕ್ಷಿಗಳ ವಲಸೆಯಲ್ಲಿ 4ನೆ ಮತ್ತು 5ನೆ ಸ್ಥಾನದಲ್ಲಿದ್ದು, ಅಲ್ಲಿಗೆ ಕ್ರಮವಾಗಿ 6,460 ಹಾಗೂ 5,821 ಪಕ್ಷಗಳು ಭೇಟಿ ನಿಡಿವೆ.
ಲೋಟ್ವಾ, ತಿಲೈಯಾ, ಉದ್ಧವ್, ಹಟಿಯಾ, ಗೆಟಾಲ್ಸುಡ್, ಪತ್ರಾಟು, ಕಂಕೆ, ಖಂಡೋಲಿ, ತೊಪ್ಚಂಚಿ, ಮೈಥೋನ್, ಪಂಚೆಟ್, ಮಸಂಜೋರ್, ತೇನುಘಾಟ್, ಕೊನಾರ್, ಬುಧ, ಗೊಂದ, ಚಂಡಿಲ್, ದಿಮ್ನಾ, ಸೀತಾರಾಂ, ಕಂಸ್‌ಜೋರ್, ಟಪ್ಕಾರಾ, ಮಲಯ್ ಹಾಗೂ ಪಲಮು ಹುಲಿ ಧಾಮದೊಳಗಿನ ಅಣೆಕಟ್ಟುಗಳಲ್ಲಿ ಪಕ್ಷಿಗಳ ಸಮೀಕ್ಷೆ ನಡೆಸಲಾಗಿದೆ.
ಬಾರ್ ಹೆಡೆಡ್ ಗ್ರೀಸ್ ಸಹಿತ ಮಂಗೋಲಿಯದಿಂದ ಬಂದಿದ್ದ ಒಂದೆರಡು ಹಕ್ಕಿಗಳನ್ನು ಸಮೀಕ್ಷಾ ತಂಡ ಗುರುತಿಸಿದೆ. ಉಳಿದಂತೆ, ವೈಟ್ ನೆಕ್ಡ್ ಸ್ಟಾರ್ಕ್, ಒರಿಯೆಂಟಲ್ ವೈಟ್ ಐಬಿಸ್ ಹಾಗೂ ನಾರ್ದನ್ ಶೊವೆಲರ್ ಹಕ್ಕಿಗಳು ವಲಸೆ ಬಂದವುಗಳಲ್ಲಿ ಸೇರಿದ್ದವು.
ಜಾರ್ಖಂಡ್‌ನ ಅಣೆಕಟ್ಟುಗಳ ಬಳಿ ಹಕ್ಕಿಗಳ ಕಳ್ಳಬೇಟೆ ತಡೆಯಲು ಸೂಕ್ತ ವ್ಯವಸ್ಥೆಯಿಲ್ಲ. ಮುಖ್ಯವಾಗಿ ವಲಸೆ ಬಂದವುಗಳು ಸೇರಿದಂತೆ ಪಕ್ಷಿ ಸಂಕುಲದ ರಕ್ಷಣೆಗಾಗಿ ಅಣೆಕಟ್ಟುಗಳ ಬಳಿ ಭದ್ರತೆಯನ್ನು ಸುಧಾರಿಸಲು ತಾವು ಪ್ರಯತ್ನಿಸಲಿದ್ದೇವೆಂದು ಅಧಿಕಾರಿ ಹೇಳಿದ್ದಾರೆ.