ಸುಂಕ ವಿನಾಯ್ತಿ ಹಿಂಪಡೆದ ಸರಕಾರ: 74 ಜೀವರಕ್ಷಕ ಔಷಧಗಳು ದುಬಾರಿ
ಹೊಸದಿಲ್ಲಿ, ಫೆ.6: ಕ್ಯಾನ್ಸರ್ ಮತ್ತು ಎಚ್‌ಐವಿಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಜೀವರಕ್ಷಕ ಔಷಧಿಗಳು ಸೇರಿದಂತೆ 74 ಔಷಧಗಳ ಆಮದು ಮೇಲಿನ ಸುಂಕ ವಿನಾಯ್ತಿಯನ್ನು ಸರಕಾರ ಹಿಂಪಡೆದಿದ್ದು, ಇವುಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾಗಲಿದೆ.
ಕೇಂದ್ರೀಯ ಅಬಕಾರಿ ಮತ್ತು ಸೀಮಾಸುಂಕ ಮಂಡಳಿಯು ಕಳೆದ ವಾರ ಹೊರಡಿಸಿರುವ ಅಧಿಸೂಚನೆಯಲ್ಲಿ 74 ಔಷಧಗಳ ಮೇಲಿನ ಮೂಲ ಸೀಮಾಸುಂಕಕ್ಕೆ ನೀಡಲಾಗಿದ್ದ ವಿನಾಯಿತಿಯನ್ನು ಹಿಂದೆಗೆದುಕೊಂಡಿದೆ.
ಇನ್ನು ಮುಂದೆ ಸೀಮಾಸುಂಕ ವಿಧಿಸಲ್ಪಡುವ ಔಷಧಗಳಲ್ಲಿ ಮೂತ್ರಕೋಶ ಕಲ್ಲುಗಳು, ಕ್ಯಾನ್ಸರ್ ಕಿಮೋಥೆರಪಿ ಮತ್ತು ರೇಡಿಯೊಗ್ರಫಿ, ಹೃದ್ರೋಗ, ಮಧುಮೇಹ, ಪಾರ್ಕಿನ್‌ಸನ್ಸ್ ಕಾಯಿಲೆ, ಮೂಳೆರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಗಳು ಮತ್ತು ಸೋಂಕು ನಿವಾರಕ ಪ್ರತಿರೋಧಕಗಳು ಸೇರಿವೆ.
ಅಲ್ಲದೆ ಬ್ಯಾಕ್ಟೀರಿಯಾ ಸೋಂಕುಗಳು, ರಕ್ತದ ಕ್ಯಾನ್ಸರ್, ಸಂಧಿವಾತ, ಮೆನೊಪಾಸ್.ಗ್ಲಾಕೋಮಾ,ಅಲರ್ಜಿಗಳು ಇತ್ಯಾದಿಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಮತ್ತು ಅರಿವಳಿಕೆ ಔಷಧಿಗಳೂ ಒಳಗೊಂಡಿವೆ.
ದೇಶಿಯ ಔಷಧಿ ತಯಾರಿಕೆ ಉದ್ಯಮವನ್ನು ರಕ್ಷಿಸುವ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಇನ್ನಷ್ಟು ಆಕರ್ಷಕವನ್ನಾಗಿಸುವ ಉದ್ದೇಶದಿಂದ ಮೂಲ ಸೀಮಾಸುಂಕ ವಿನಾಯಿತಿಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಕೆಪಿಎಂಜಿ ಇಂಡಿಯಾದ ಪಾಲುದಾರ ಮತ್ತು ಪರೋಕ್ಷ ತೆರಿಗೆ ವಿಭಾಗದ ಮುಖ್ಯಸ್ಥ ಸಚಿನ್ ಮೆನನ್ ತಿಳಿಸಿದರು.
ಕೆಲವು ಜೀವರಕ್ಷಕ ಔಷಧಗಳ ಸೀಮಾಸುಂಕ ದರಗಳಲ್ಲಿ ಶೇ.35ರವರೆಗೆ ಏರಿಕೆಯನ್ನೂ ಮಾಡಲಾಗಿದೆ ಎಂದು ಡೆಲೊಯಿಟ್ಟೆ ಇನ್ ಇಂಡಿಯಾದ ಹಿರಿಯ ನಿರ್ದೇಶಕ ಎಂ.ಎಸ್.ಮಣಿ ತಿಳಿಸಿದರು.
ಆಮದು ಈಗ ದುಬಾರಿಯಾಗುವುದರಿಂದ ಈ ಔಷಧಗಳ ದೇಶಿಯ ಉತ್ಪಾದನೆಯನ್ನು ಉತ್ತೇಜಿಸುವ ಸರಕಾರದ ಉದ್ದೇಶವನ್ನು ಈ ಬದಲಾವಣೆಗಳು ಸೂಚಿಸುತ್ತಿವೆ ಎಂದರು.